ಬೆಂಗಳೂರು: ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಇದೇ ತಿಂಗಳು ಉತ್ತರ ಕರ್ನಾಟಕ ಭಾಗದಿಂದ ಚಾಲನೆ ಸಿಗಲಿದೆ. ಆದರೆ ಈ ಬಾರಿಯ ಗ್ರಾಮ ವಾಸ್ತವ್ಯ ಹಿಂದಿನ ಗ್ರಾಮ ವಾಸ್ತವ್ಯಕ್ಕಿಂತ ಸಾಕಷ್ಟು ವಿಶೇಷವಾಗಿರಲಿದೆ. ಜೊತೆಗೆ ಗ್ರಾಮ ವಾಸ್ತವ್ಯಕ್ಕೆ ಷರತ್ತುಗಳನ್ನು ಹಾಕಿದ್ದಾರೆ.
ಪಂಚಾಯ್ತಿ ಅಥವಾ ಹೋಬಳಿ ಮಟ್ಟದ ಸರ್ಕಾರಿ ಶಾಲೆಯಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಆ ಹೋಬಳಿ ಅಥವಾ ಪಂಚಾಯ್ತಿ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನ ಬಿಟ್ಟು ಬೇರೆ ಹೋಬಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಲ್ಲಿಗೆ ಬರುವಂತಿಲ್ಲ. ಅದೇ ಹೋಬಳಿ ಅಥವಾ ಗ್ರಾಮ ಪಂಚಾಯ್ತಿ ಮಟ್ಟದ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಮುಂದಿಡುವಂತಿಲ್ಲ. ಸಂಪೂರ್ಣವಾಗಿ ಗ್ರಾಮದ ಹಿತಕ್ಕಾಗಿ ಬೇಡಿಕೆ ಮಾತ್ರ ಇರಬೇಕು ಎಂದು ತಿಳಿದು ಬಂದಿದೆ.
Advertisement
Advertisement
ಒಂದು ವೇಳೆ ಕಾರ್ಯಕರ್ತರ ಬೇಡಿಕೆ ಇದ್ದರೆ ಪ್ರತ್ಯೇಕವಾಗಿ ಮಾತನಾಡಿ ಮನವಿ ಸಲ್ಲಿಸಬಹುದು. ಸಿಎಂ ಉಳಿದುಕೊಳ್ಳುವ ಶಾಲೆ ಹೊಸದಾಗಿ ಸುಣ್ಣ ಬಣ್ಣ ಬಳಿದು ಸಿದ್ಧಪಡಿಸಿ ಆಡಂಬರ ಮಾಡುವಂತಿಲ್ಲ. ಶೌಚಾಲಯ ಮುಂತಾದ ವ್ಯವಸ್ಥೆಗಳು ಮೊದಲು ಹೇಗಿತ್ತೋ ಹಾಗೆ ಇರಬೇಕು. ಮುಖ್ಯಮಂತ್ರಿ ಬರುತ್ತಾರೆ ಅನ್ನೋ ಕಾರಣಕ್ಕೆ ಶಾಲೆಗೆ ಏಕಾಏಕಿ ಸೌಲಭ್ಯ ಕಲ್ಪಿಸುವಂತಿಲ್ಲ. ಸಿಎಂ ಕುಮಾರಸ್ವಾಮಿಗಾಗಿ ಹೊಸದಾಗಿ ವ್ಯವಸ್ಥೆ ಕಲ್ಪಿಸಿ ಸಿಎಂ ಹೋದ ನಂತರ ಅದನ್ನ ಅಲ್ಲಿಂದ ಕೊಂಡೊಯ್ಯುವ ಬೂಟಾಟಿಕೆ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದ್ದಾರೆ.
Advertisement
2006ರಲ್ಲಿ ಗ್ರಾಮ ವಾಸ್ತವ್ಯ ವೇಳೆ ಅಧಿಕಾರಿಗಳ ಇಂತಹ ವರ್ತನೆಯಿಂದ ಸಿಎಂ ಕುಮಾರಸ್ವಾಮಿಗೆ ಮುಜುಗರ ಆಗಿತ್ತು. ಅದಕ್ಕೆ ಈ ಬಾರಿ ಅಂತದ್ದಕ್ಕೆ ಅವಕಾಶ ಆಗದ ರೀತಿ ಪೂರ್ಣ ಪ್ರಮಾಣದ ಗ್ರಾಮ ವಾಸ್ತವ್ಯ ಆಗುವಂತೆ ನೋಡಿಕೊಳ್ಳಿ ಎಂದು ಸಿಎಂ ಸೂಚಿಸಿದ್ದಾರೆ. ಸಿಎಂ ಕಚೇರಿಯಿಂದ ಇದೇ ಮಾಹಿತಿ ಜಿಲ್ಲಾಡಳಿತಕ್ಕೆ ರವಾನೆಯಾಗಲಿದೆ. ಹೀಗೆ ಈ ಬಾರಿಯ ಗ್ರಾಮ ವಾಸ್ತವ್ಯವನ್ನ ಯಶಸ್ವಿಗೊಳಿಸಲು ಸಿಎಂ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ.