ಬೆಂಗಳೂರು: ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಅವರು ಸುಮಲತಾ ಅಂಬರೀಶ್ ಅವರ ಬಗ್ಗೆ ಕೊಟ್ಟ ಹೇಳಿಕೆಗೆ ಸ್ವತಃ ಸಿಎಂ ಕುಮಾರಸ್ವಾಮಿ ಅವರು ಕ್ಷಮೆಯಾಚಿಸಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಅವರು ಪುಟಾಣಿ ಮಕ್ಕಳಿಗೆ ಲಸಿಕೆ ಹಾಕೋ ಮೂಲಕ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೇವಣ್ಣ ಅವರು ಸುಮಲತಾ ಅವರ ವಿರುದ್ಧ ಮಾತನಾಡಿಲ್ಲ. ಅವರನ್ನು ಟೀಕಿಸಿಲ್ಲ. ರೇವಣ್ಣ ಬಳಿ ನಾನು ಈ ಬಗ್ಗೆ ಮಾತನಾಡಿ, ಯಾಕೆ ಈ ಹೇಳಿಕೆ ನೀಡಿದಿರಿ ಅಂತ ಕೇಳಿದ್ದೇನೆ. ಸುಮಲತಾ ಅವರು ಅಂಬರೀಶ್ ಅವರು ಅಗಲಿರುವ ನೋವಿನಲ್ಲಿದ್ದಾರೆ. ಈ ನಡುವೆ ರಾಜಕೀಯ ಬೇಡವಾಗಿತ್ತು ಎನ್ನುವ ದೃಷ್ಟಿಯಲ್ಲಿ ಹೇಳಿದ್ದು ಅಷ್ಟೆ. ಆದರೆ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು. ರೇವಣ್ಣ ಅವರ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅವರ ಪರವಾಗಿ ಕ್ಷಮೆ ಕೇಳುತ್ತೇನೆ. ನಮ್ಮದು ಮಹಿಳೆಯರಿಗೆ ಗೌರವ ಕೊಡುವ ಕುಟುಂಬ. ಯಾವ ಹೆಣ್ಣು ಮಕ್ಕಳಿಗೂ ನಾವು ಅವಮಾನ ಮಾಡಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.
ರೇವಣ್ಣ ಅವರು ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು ಅಂತ ಹೇಳಿಕೆಗೆ ಅಂಬಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಬಿಜೆಪಿ ನಾಯಕರು ಕೂಡ ರೇವಣ್ಣ ಹೇಳಿಕೆಯನ್ನು ಖಂಡಿಸಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಬಹುತೇಕ ಜನರು ಸುಮಲತಾ ಅವರಿಗೆ ಬೆಂಬಲ ವ್ಯಕ್ತಪಡಿಸಿ, ದೇವೇಗೌಡರು ಕುಟುಂಬ ರಾಜಕೀಯ ಮಾಡುತ್ತಿದ್ದಾರೆ ಅಂತ ಆರೋಪಗಳನ್ನೂ ಕೂಡ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv