ಮಂಡ್ಯ: ರೈತರ ಸಾಲಮನ್ನಾ ಮಾಡಿ ಮಾವು ಬೆಳೆಗೆ ಬೆಂಬಲ ಬೆಲೆ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇದೀಗ ರೇಷ್ಮೆ ಬೆಳೆಗಾರ ಬೆನ್ನಿಗೆ ನಿಲ್ಲುವ ಮೂಲಕ ರೇಷ್ಮೆ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ.
ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕರ್ತರ ಅಭಿನಂದನಾ ಸಮಾವೇಶದಲ್ಲಿ ರೇಷ್ಮೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಮಿಶ್ರತಳಿ ಗೂಡು ಪ್ರತಿ ಕೆಜಿಗೆ 40 ರೂಪಾಯಿ ಹಾಗೂ ಬಿಳಿಗೂಡು (ಬೈವೋಲ್ಟಿನ್) ಪ್ರತಿ ಕೆಜಿಗೆ 50 ರೂಪಾಯಿ ಬೆಂಬಲ ಬೆಲೆಯನ್ನ ಘೋಷಣೆ ಮಾಡಿದ್ದಾರೆ.
Advertisement
ಇದೇ ವೇಳೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳನ್ನು ಗೆಲ್ಲಿಸಿದ್ದೀರಿ. ನನ್ನ ಭಾವನೆಗಳನ್ನು ವ್ಯಕ್ತಪಡಿಸುವ ಮುನ್ನ ಜಿಲ್ಲೆಯ ತಂದೆ-ತಾಯಂದಿರಿಗೆ ನಮಸ್ಕಾರ. ರಾಜ್ಯ ರಾಜಕಾರಣದಲ್ಲಿ ನನ್ನ ಎತ್ತರಕ್ಕೆ ಪ್ರಮುಖ ಪಾತ್ರ ವಹಿಸಿದ್ದು ಮಂಡ್ಯ. ಈ ವರ್ಷ ನೀರಿನ ಭವಣೆ ನಿಮಗೆ ಬರಲ್ಲ. ಉತ್ತಮ ಬೆಳೆ ಬೆಳೆಯಲು ಚಾಮುಂಡೇಶ್ವರಿ ಆಶೀರ್ವಾದ ನಿಮಗೆ ದೊರಕಿದೆ ಎಂದು ಸಂತಸದಿಂದ ಸಿಎಂ ಹೇಳಿದ್ದಾರೆ.
Advertisement
ಆರ್ಥಿಕವಾಗಿ ಸರ್ಕಾರದ ಖಜಾನೆ ತುಂಬಿಸುವ ಅನಿವಾರ್ಯತೆ ಇದೆ. ಆದರೂ ರೈತರಿಗಾಗಿ ಬೆಂಬಲ ಬೆಲೆ ಘೋಷಣೆ ಮಾಡಿದ್ದೇನೆ. ರೈತರು ಆತ್ಮಹತ್ಯೆಗೆ ಮುಂದಾಗಬೇಡಿ ಎಂದು ಕೈಮುಗಿದು ಮನವಿ ಮಾಡಿಕೊಂಡರು.
Advertisement
ಕಣ್ಣೀರು ಹಾಕಿದ್ದ ವಿಚಾರವಾಗಿ ಮಾತನಾಡಿದ ಅವರು, ನಾನು ಭಾವನಾತ್ಮಕ ಜೀವಿ, ಮನುಷ್ಯತ್ವದ ಜೀವಿ. ತಾಯಿ ಹೃದಯ ಹೊಂದಿದ ನಿಮ್ಮ ಮನೆಯ ಮಗನಾಗಿದ್ದು, ನಾನು ಅಸಹಾಯಕತೆಯಿಂದ ಕಣ್ಣೀರು ಹಾಕಿದ್ದಲ್ಲ. ನನ್ನ ಭಾವನೆಗಳನ್ನು ಕೆಲವರು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮಂಡ್ಯ ಜನತೆ ಕೊಟ್ಟಿರುವ ಶಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೊನೆಯ ಉಸಿರು ಇರುವವರೆಗೂ ಮಂಡ್ಯವನ್ನ ನಾನು ಮರೆಯಲಾಗಲ್ಲ ಎಂದಿದ್ದಾರೆ.
Advertisement
ಕೇಂದ್ರದಿಂದ ಹಲವು ಅನುದಾನಗಳನ್ನು ತರುತ್ತಿದ್ದು, ರಾಜ್ಯದಲ್ಲಿ 5 ಮೆಗಾಡೈರಿ ತರಲಿದ್ದು, ಅದರಲ್ಲಿ ಒಂದು ಮಂಡ್ಯದಲ್ಲಿ ನಿರ್ಮಾಣ ಮಾಡುತ್ತೇನೆ. ಮಂಡ್ಯ ಅಂದರೆ ಇಂಡಿಯಾ ಅಂತಾರೆ ಇಲ್ಲಿಂದಲೇ ನನ್ನ ಅಭಿವೃದ್ಧಿ ಕಾರ್ಯಕ್ರಮಗಳ ಪಯಣ ಸಾಗಲಿದೆ. ಯಾವುದೇ ಆತಂಕ ಬೇಡ ನಿಮ್ಮನ್ನು ಉಳಿಸುವುದು ನನ್ನ ಕರ್ತವ್ಯ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.