ಶಿವಮೊಗ್ಗ: ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿರುವ ಸಿ.ಎಂ ಇಬ್ರಾಹಿಂ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಇಬ್ರಾಹಿಂ ಅವರ ಒಂದು ಹೆಜ್ಜೆ ಧೂಳನ್ನು ಸಹ ನಮ್ಮ ಪಕ್ಷದೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ಏನು? ಅವರು ಎಷ್ಟರಮಟ್ಟಿಗೆ ಅನ್ಯಾಯ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಹಿಂದೆ ಇಬ್ರಾಹಿಂ ಅವರು ಸಚಿವರಾಗಿದ್ದಾಗ ಅವರು ರಾಜೀನಾಮೆ ಕೊಡುವಂತೆ ಬಿಜೆಪಿ ಹೋರಾಟ ಮಾಡಿತ್ತು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೋರಾಟ ಮಾಡಿದ್ದೇ ನಮ್ಮ ಪಕ್ಷ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ಭಯದಿಂದ ‘ಬಾಬಾಜಿ’ ಒತ್ತಡದಲ್ಲಿದ್ದಾರೆ: ಅಖಿಲೇಶ್
ಇಬ್ರಾಹಿಂ ಹಾಗೂ ಅವರ ಸಹೋದರ ಈ ಹಿಂದೆ ಭದ್ರಾವತಿಯಲ್ಲಿ ಏನೇನು ಅನ್ಯಾಯ ಮಾಡಿದ್ದಾರೆ ಎಂಬುದು ಗೊತ್ತಿದೆ. ಅವರ ಅನ್ಯಾಯವನ್ನು ಪೂರ್ತಿ ಜಿಲ್ಲೆ, ರಾಜ್ಯದ ಜನ ಗಮನಿಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಇಬ್ರಾಹಿಂ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.