– ಪಾಕಿಸ್ತಾನವನ್ನ ಮೆಟ್ಟಿ ನಿಲ್ಲೋ ಶಕ್ತಿ ಭಾರತಕ್ಕಿದೆ
– ನವಾಜ್ ಶರೀಫ್ ಮನಿಗೆ ಯಾಕ್ರಿ ಹೋಗಿದ್ರಿ?: ಮೋದಿ ವಿರುದ್ಧ ಕಿಡಿ
ರಾಯಚೂರು: ರಾಘವೇಂದ್ರ ಶ್ರೀಗಳು ನಮ್ಮ ಅತಿಥಿಗಳೆಂದು ತಿಳಿದಿದ್ದ ಹೈದರಾಬಾದ್ ನವಾಬ್‍ರು, ಶ್ರೀಗಳಿಗೆ ಮಂತ್ರಾಲಯ, ಬೃಂದಾವನಕ್ಕೆ ಜಾಗ ಕೊಟ್ಟಿದ್ದರು ಎಂದು ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕವು ಬಸವಣ್ಣ, ಕನಕದಾಸ, ಪುರಂದರದಾಸರ ನಾಡು. ಕೆಲವರು ಇಂದು ಹಿಂದೂ-ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾವೆಲ್ಲ ಒಂದೇ ಎನ್ನುವ ದೇಶಾಭಿಮಾನ ಎಲ್ಲರಲ್ಲಿಯೂ ಬೆಳೆಯಬೇಕು ಎಂದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹುತಾತ್ಮ ವೀರ ಸಂಗೊಳ್ಳಿ ರಾಯಣ್ಣನ ವಂಶದವರು ಎಂದು ಹೇಳಿದರು.
ನಮ್ಮ ಚರ್ಮ ತೆಗೆದು ನಿಮ್ಮ ಪಾದಕ್ಕೆ ಚಪ್ಪಲಿ ಮಾಡಿಕೊಟ್ಟರೂ ನಿಮ್ಮ ಋಣ ತೀರಿಸಲು ಆಗಲ್ಲ. ಈ ಬಾರಿ ಕಾಂಗ್ರೆಸ್‍ಗೆ ಬೆಂಬಲ ನೀಡುವಂತೆ ಮತದಾರರಿಗೆ ಮನವಿ ಮಾಡಿಕೊಂಡ ಅವರು, ಭಾಷಣದ ಉದ್ದಕ್ಕೂ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.
ಬಿಜೆಪಿ ದೇಶಕ್ಕೆ ಏನು ಕೊಟ್ಟಿದೆ ಗೊತ್ತೆ? ನರೇಂದ್ರ ಮೋದಿ, ನೀರವ್ ಮೋದಿ, ವಿಜಯ್ ಮಲ್ಯ ಅಂತ ವ್ಯಕ್ತಿಗಳನ್ನು ಕೊಟ್ಟಿದೆ. ಆದರೆ ಕಾಂಗ್ರೆಸ್ ಮೋತಿಲಾಲ್ ನೆಹರು, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೊಡುಗೆ ನೀಡಿದೆ. ಪತಿಯನ್ನು ಕಳೆದುಕೊಂಡ ಸೋನಿಯಾ ಗಾಂಧಿ ಅವರು ಎದೆಗುಂದಲಿಲ್ಲ. ದೇಶಕ್ಕಾಗಿ ನಾನು ಕೂಡ ಪ್ರಾಣ ಅರ್ಪಿಸುತ್ತೇನೆಂದು ಎರಡು ಮುಗ್ಧ ಮಕ್ಕಳನ್ನು ಬೆಳೆಸಿದರು ಎಂದು ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡರು.
ಪಾಕಿಸ್ತಾನಕ್ಕೆ ಹೋಗಿ, ಆಗಿನ ಪ್ರಧಾನಿ ನವಾಜ್ ಶರೀಫ್ ಅವರ ಮನೆಯಲ್ಲಿ ನರೇಂದ್ರ ಮೋದಿ ಬಿರಿಯಾನಿ ತಿಂದು ಬಂದರು. ಸಾಂಪ್ರದಾಯಿಕ ಶತ್ರುಗಳನ್ನು ಅಪ್ಪಿಕೊಂಡು ಬಾಯಿ-ಬಾಯಿ ಅಂತ ಹೇಳಿದರು. ಆಗ ಇದನ್ನು ವಿರೋಧಿಸಿದ ಕಾಂಗ್ರೆಸ್‍ಗೆ ದೇಶದ್ರೋಹಿಗಳೆಂದು ಬಿಜೆಪಿಯವರು ಕರೆದರು. ಈಗ ಹೇಳಲಿ ಯಾರು ದೇಶದ್ರೋಹಿಗಳಂತ ಎಂದು ಪುಲ್ವಾಮಾ ದಾಳಿಯನ್ನು ಖಂಡಿಸಿ ಕಿಡಿಕಾರಿದರು.
ಭಾರತದಲ್ಲಿ 130 ಕೋಟಿ ಜನರಿದ್ದಾರೆ. ಪಾಕಿಸ್ತಾನವನ್ನು ಮೆಟ್ಟಿನಿಲ್ಲುವ ಶಕ್ತಿ ನಮ್ಮ ದೇಶಕ್ಕಿದೆ. ಆದರೆ ಪುಲ್ವಾಮಾ ದಾಳಿಯಿಂದ ನಮ್ಮ ಗೌರವಕ್ಕೆ ದಕ್ಕೆಯಾಗಿದೆ ಎಂದು ಹರಿಹಾಯ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv