ಮೈತ್ರಿ ಸರ್ಕಾರದ ತಾಳಿ ಹರಿದು ಕರೆದುಕೊಂಡು ಬರೋದು ಸರಿಯಲ್ಲ: ಸಿಎಂ ಇಬ್ರಾಹಿಂ

Public TV
2 Min Read
CM Ibrahim

– ಮೋದಿ ಬಿಟ್ರೆ ಬಿಜೆಪಿ ಖಲಾಸ್, ನಮ್ಮಲ್ಲಿ ಪ್ರಧಾನಿಯಾಗೋಕೆ ಸರದಿಯಿದೆ
– ಭಾರತ ಮಾತೆ ಬಂಜೆಯಲ್ಲ ನಾಯಕರನ್ನು ಭೂಮಿಗೆ ನೀಡ್ತಾಳೆ

ರಾಯಚೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮದುವೆಯಾಗಿದೆ. ಆದರೆ ಮದುವೆಯಾದವರ ತಾಳಿ ಹರಿದು ಕರೆದುಕೊಂಡು ಬರುವುದು ಸರಿಯಲ್ಲ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ದೇಶದ ಪರಿಸ್ಥಿತಿ ಸವಾಲಾಗಿ ನಿಂತಿದೆ. ಇದನ್ನು ಎದುರಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ (ಚೌಕಿದಾರ್) ವಿಫಲರಾಗಿದ್ದಾರೆ. ದೇಶದ ಏಕತೆಗಾಗಿ ನಾವು ಕಂಕಣಬದ್ಧರಾಗಿದ್ದೇವೆ ಎಂದು ಹೇಳಿದರು.

Modi BSY

ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲೆ ದಾಳಿ ಮಾಡಲು ಉಗ್ರರು ಹೇಗೆ ನುಸುಳಿದರು? ಅವರ ಕೈಯಲ್ಲಿ ಆರ್ ಡಿಎಕ್ಸ್ ಹೇಗೆ ಬಂತು? ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದ ಅವರು, ಕೆಲ ಸರ್ವೇಗಳ ಪ್ರಕಾರ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ ಎನ್ನಲಾಗುತ್ತದೆ. ಆದರೆ ಅದು ಸತ್ಯವಾಗುವುದಿಲ್ಲ. ಸರ್ವೇಗಳಿಗೆ ನಾವು ವಿಚಲಿತರಾಗುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಅಯ್ಯೋ ಅನಿಸುತ್ತದೆ. ಆಪರೇಷನ್ ಕಮಲದಲ್ಲಿ ವಿಫಲವಾಗಿದ್ದಾರೆ. ಆಸೆ ಇರಬೇಕು, ದುರಾಸೆ ಸರಿಯಲ್ಲ. ಆಪರೇಷನ್ ಕಮಲಕ್ಕೆ ಹಣ ಯಾಕೆ ಖರ್ಚು ಮಾಡುತ್ತೀರಿ. ಆ ಹಣವನ್ನು ಬರಗಾಲ ಪರಿಹಾರಕ್ಕೆ ಉಪಯೋಗಿಸಿ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

CM Ibrahim 1

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕಾರಕ್ಕಿಂತ ಜನರ ಸೇವೆ ಮುಖ್ಯ ಎನ್ನುವ ಭಾವನೆ ಇರಬೇಕು. ದಿನಕ್ಕೆ ಒಬ್ಬ ಪ್ರಧಾನಿಯಾಗಲು ಮಹಾಘಟಬಂಧನ್‍ನಲ್ಲಿ 10 ಜನರಿದ್ದಾರೆ. ಆದರೆ ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರು ಮಾತ್ರ ಪ್ರಧಾನಿ ಅಭ್ಯರ್ಥಿ. ಅವರಿಲ್ಲ ಅಂದ್ರೆ ಬಿಜೆಪಿ ಖಲಾಸ್. ನಮ್ಮಲ್ಲಿ ಒಬ್ಬರ ಹಿಂದೆ ಒಬ್ಬರು ಪ್ರಧಾನಿಯಾಗಲು ಸಿದ್ಧರಾಗಿರುತ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿ ನಿರ್ಧಿಷ್ಟವಾಗಿ ತತ್ವ, ಸಿದ್ಧಾಂತವಿಲ್ಲ. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಯಶವಂತ್ ಸಿನ್ಹಾ ಎಲ್ಲಿ ಹೋದರು. ಅವರನ್ನು ನೀವೇ ಹುಡುಕಬೇಕಿದೆ. ಭಾರತ ಮಾತೆ ಬಂಜೆಯಲ್ಲ. ಆಕೆ ಅನೇಕ ನಾಯಕರನ್ನು ಕೊಡುತ್ತಾಳೆ. ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ಮಹಾಮೈತ್ರಿಯಲ್ಲಿ ಯಾರು ಪ್ರಧಾನಿಯಾಗುತ್ತಾರೆ ಎನ್ನುವುದು ಮುಖ್ಯವಲ್ಲ. ಬಿಜೆಪಿಯಿಂದ ಅಧಿಕಾರ ತಪ್ಪಿಸುವುದೇ ನಮ್ಮ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.

shah modi

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *