– ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕ ಉತ್ತರ ಕರ್ನಾಟಕ ಪ್ರವಾಸ
ಹುಬ್ಬಳ್ಳಿ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರವಾಸ ಮಾಡಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಕಡೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದಾರೆ.
ಇಂದು ಹುಬ್ಬಳ್ಳಿ ನಗರದಲ್ಲಿ ನಡೆಯಲಿರುವ ನ್ಯಾಯಾಲಯದ ಸಂಕೀರ್ಣ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕದ ಜನರಿಗೆ ಮನವಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲೇ ಇದ್ದು ಅಭಿವೃದ್ಧಿ ಮಾಡುತ್ತೆನೆ. ಈಗಲೂ ಮೂರು ದಿನ ಇಲ್ಲೇ ಇರಬೇಕು ಎಂಬ ಉದ್ದೇಶವಿತ್ತು. ಆದರೆ ಹಲವು ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಸಂಹಿತೆ ಜಾರಿಗೆ ಇರುವ ಕಾರಣ, ನಾನು ಮುಂದಿನ ದಿನಗಳಲ್ಲಿ ಬಂದು ಹೆಚ್ಚಿನ ಸಮಯ ಇಲ್ಲೇ ಕೆಲಸ ಮಾಡುತ್ತೆನೆ ಎಂದು ಹೇಳಿದರು.
ಮುಂದಿನ ಪ್ರವಾಸದ ವೇಳೆ ಈ ಭಾಗದ ಹಳ್ಳಿಗಳಿಗೆ ಹಾಗೂ ನಗರಗಳಿಗೆ ಭೇಟಿ ಮಾಡುವ ಕುರಿತು ಹೇಳಿದ ಸಿಎಂ, ಯಾವುದೇ ಸಮಸ್ಯೆ ಇದ್ದರೂ ಅವುಗಳಿಗೆ ಸೂಕ್ತ ನಿರ್ಧಾರ ಮಾಡಲಾಗುತ್ತದೆ. ಅಲ್ಲದೇ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತದೆ. ರಾಜ್ಯ ನಾಯಕತ್ವ ವಹಿಸಿದ ಮೇಲೆ ಇದೇ ಮೊದಲ ಭೇಟಿಯಾಗಿದ್ದು, ಜನರು ನನ್ನ ಮನವಿಯನ್ನು ಅನ್ಯಥಾ ಭಾವಿಸದಂತೆ ಮನವಿ ಮಾಡಿದರು.
ಇದೇ ವೇಳೆ ಬೆಂಗಳೂರು ಏರ್ ಶೋ ಶಿಫ್ಟ್ ಮಾಡುವ ಕೇಂದ್ರ ಸರ್ಕಾರ ನೀತಿಯ ಕುರಿತು ಪ್ರಶ್ನೆಗೆ ಉತ್ತರಿಸಿ, ಲೋಕಸಭೆ ಚುನಾವಣೆ ಇಟ್ಟುಕೊಂಡು ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ. ಏರ್ ಶೋ ಬೆಂಗಳೂರಿನಿಂದ ಶಿಫ್ಟ್ ಮಾಡಲು ಉತ್ತರ ಪ್ರದೇಶದಲ್ಲಿ ಲೋಕಸಭೆ ಸ್ಥಾನಗಳು ಹೆಚ್ಚಾಗಿರುವುದು ಕಾರಣ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನನಗೆ ಬಂದಿಲ್ಲ. ಆದರೆ ಮಾಧ್ಯಮಗಳ ವರದಿ ಅನ್ವಯ ಈ ನಿರ್ಧಾರ ಮಾಡುವುದು ಸರಿಯಲ್ಲ ಎಂದರು. ಇದನ್ನು ಓದಿ: ಏಷ್ಯಾದ ವಿಶಿಷ್ಟ ನ್ಯಾಯಾಲಯ ಸಂಕೀರ್ಣ ಭಾನುವಾರ ಹುಬ್ಬಳ್ಳಿಯಲ್ಲಿ ಲೋಕಾರ್ಪಣೆ
ಕೆಶಿಪ್ ಸ್ಥಳಾಂತರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ಎಚ್‍ಡಿಕೆ, ಈ ಕುರಿತು ಮಾಹಿತಿಯನ್ನು ಆಯಾ ಇಲಾಖೆಯ ಅಧಿಕಾರಿಗಳಿಗೆ ಕೇಳಿ. ಕೆಲವು ಇಲಾಖೆಗಳ ಕಾಮಗಾರಿ ಮುಗಿದ ಬಳಿಕ ಆಯಾ ಇಲಾಖೆಗಳ ಕಚೇರಿಗಳನ್ನು ಅವುಗಳ ವ್ಯಾಪ್ತಿಯಲ್ಲಿ ಚರ್ಚೆ ನಡೆಸಿ ತೀರ್ಮಾನಿಸಲಾಗುತ್ತದೆ. ಈ ಕುರಿತು ನನ್ನ ಬಳಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews