ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೇಟ್ಟರ್ ಹೇಳಿಕೆಯಿಂದ ನನಗೆ ನೋವುಂಟಾಗಿದೆ. ಅವರು ನನ್ನ ತಾಯಿಯನ್ನು ರಾಜಕೀಯಕ್ಕೆ ಎಳೆದಿದ್ದಾರೆ. ಚೆನ್ನಮ್ಮ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಿ ಎಂದಿದ್ದಾರೆ. ಈ ಮೂಲಕ ನನ್ನ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹಾಗೂ ಕುಮಾರಸ್ವಾಮಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಟೀಕೆ ಆರೋಪಗಳನ್ನು ನಾನು ಗಮನಿಸಿದ್ದೇನೆ. ಅವರಿಗೆ ಮತದಾರರು ಮೇ 23 ರಂದು ಉತ್ತರ ಕೊಡಲಿದ್ದಾರೆ. ಜಗದೀಶ್ ಶೆಟ್ಟರ್ ಅವರು ನಮ್ಮ ತಾಯಿಯನ್ನು ರಾಜಕೀಯಕ್ಕೆ ಎಳೆಯುವ ಮೂಲಕ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ದೇಶದ ಪ್ರಧಾನಿ ತಮ್ಮ ತಪ್ಪು ಮಾಹಿತಿಯಿಂದ ಮಾತನಾಡಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಜನ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಶುಕ್ರವಾರ ಅಸಮರ್ಥ ಸರ್ಕಾರ ಎಂದಿದ್ದಾರೆ. ನಮ್ಮದು ಸಮರ್ಥ ಸರ್ಕಾರ ಎಂದು ಮೋದಿ ಅವರು ಮೊದಲು ತಿಳಿದುಕೊಳ್ಳಲಿ. ನಮ್ಮ ಸರ್ಕಾರ ಉತ್ತರ ಕರ್ನಾಟಕದ ಜನ ಗುಳೆ ಹೋಗದಿರಲಿ ಎಂದು ಹಲವಾರು ಯೋಜನೆಗಳನ್ನು ತಂದಿದೆ. ನರೇಗಾ ಯೋಜನೆಯ 1500 ಕೋಟಿ ರೂಪಾಯಿ ಹಣವನ್ನು ಕೊಟ್ಟಿಲ್ಲ. ಮೋದಿ ಸರ್ಕಾರ ದಿವಾಳಿ ಸರ್ಕಾರ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ಕೇಂದ್ರದ ನರೇಗಾ ಯೋಜನೆಯ ಹಣವನ್ನು ಕೊಟ್ಟಿದ್ದೇನೆ. ಬಾಗಲಕೋಟೆಯನ್ನು ನಾವೂ ನೋಡಿದ್ದೇವೆ. ನಾವು ಬಾಲಕೋಟ್ ನೋಡಿಲ್ಲ, ನೀವು ಮಾತ್ರ ಗಡಿಯನ್ನು ನೋಡಿದವರು. ಇವರೇ ಹೋಗಿ ಏರ್ ಸ್ಟ್ರೈಕ್, ಪಾಕಿಸ್ತಾನದಲ್ಲಿ ಯುದ್ಧ ಮಾಡಿದ ಹಾಗೆ ಮಾತನಾಡುತ್ತಾರೆ. ನಿಮ್ಮ ಸರ್ಕಾರಕ್ಕೆ ದೇಶದ ಜನರಿಗೆ ಉದ್ಯೋಗ ಕೊಡಲು ಆಗಲಿಲ್ಲ ಎಂದು ಕಿಡಿಕಾರಿದ್ರು.
ಮಳವಳ್ಳಿ ಯೋಧನ ಕುಟುಂಬವನ್ನು ನೋಡಿ ನಾನು ಕಣ್ಣೀರು ಹಾಕಿದ್ದೇನೆ. ಕೆಲಸ ಸಿಗದೇ ಜನ ಸೈನ್ಯಕ್ಕೆ ಸೇರುತ್ತಾರೆ ಎಂದು ನಾ ಹೇಳಿದ್ದೆ. ಆದ್ರೆ ನನ್ನ ಮಾತನ್ನು ತಿರುಚಿ ಬೇರೆಯೇ ಹೇಳಿಕೆ ನೀಡುತ್ತಾರೆ. ಸಾಲ ಮನ್ನಾ ಬಗ್ಗೆ ಮೋದಿ ಮಾತನಾಡುತ್ತಾರೆ. ಧಾರವಾಡ ಜಿಲ್ಲೆಯೊಂದರಲ್ಲಿ 54 ಸಾವಿರ ಕುಟುಂಬಕ್ಕೆ ಸಾಲ ಮನ್ನಾ ಮಾಡಲಾಗಿದೆ. ನಾನು ಕಿಸಾನ್ ಸಮ್ಮನ್ ಯೋಜನೆ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಹೇಳುತ್ತಾರೆ. ರಾಜ್ಯ ಸರ್ಕಾರ ರೈತರ ಸಂಪೂರ್ಣ ಮಾಹಿತಿ ನೀಡಿದೆ. ನಾನು ಮೋದಿಯಂತೆ ದಾಖಲೆ ಇಲ್ಲದೆ ಮಾತನಾಡುವವನಲ್ಲ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ರು.