ಮಂಡ್ಯ: ಮುಖ್ಯಮಂತ್ರಿ ಆದ ನಂತ್ರ ಆಗಸ್ಟ್ ತಿಂಗಳಲ್ಲಿ ಮಂಡ್ಯದ ಅರಳಕುಪ್ಪೆ ಗ್ರಾಮದಲ್ಲಿ ರೈತರ ಜೊತೆ ಗದ್ದೆಗಿಳಿದಿದ್ದ ಮುಖ್ಯಮಂತ್ರಿ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ರು. ಅಂದು ನಾಟಿ ಮಾಡಿದ ಗದ್ದೆಯ ಕಟಾವಿನ ಸಮಯಕ್ಕೆ ಮತ್ತೆ ಆಗಮಿಸಿದ ಕುಮಾರಸ್ವಾಮಿ ರೈತರ ಕಷ್ಟಗಳಿಗೆ ಸ್ಪಂದಿಸಿ ಜೊತೆಯಿರುವ ಭರವಸೆ ನೀಡಿ ಸುಗ್ಗಿ ಪೂಜೆಯಲ್ಲಿ ಪಾಲ್ಗೊಂಡ್ರು. ಮುಖ್ಯಮಂತ್ರಿಗಳ ಆಗಮನಕ್ಕಾಗಿ ಇಡೀ ಗದ್ದೆ ಅಲಂಕೃತಗೊಂಡು ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
Advertisement
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಆಗಸ್ಟ್ 11ರಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಭತ್ತ ನಾಟಿ ಮಾಡಿದ್ರು. ಸ್ವತಃ ತಾವೇ ನಾಟಿ ಮಾಡಿದ್ದ ಭತ್ತ ಫಸಲು ತೆನೆ ತುಂಬಿ ನಳನಳಿಸುತ್ತಿತ್ತು. ಶುಕ್ರವಾರ ಅದೇ ಜಮೀನಿನಲ್ಲಿ ಗದ್ದೆಗಿಳಿದ ಸಿಎಂ ಸಾಹೇಬ್ರು, ರೈತಾಪಿ ವರ್ಗದ ಜೊತೆ ಸೇರಿ ಭತ್ತದ ಗದ್ದೆಗೆ ಪೂಜೆ ಸಲ್ಲಿಸಿ ಕಟಾವಿಗೆ ಚಾಲನೆ ನೀಡಿದ್ರು. ಬಳಿಕ ಗದ್ದೆಯ ಪಕ್ಕದಲ್ಲೇ ಇದ್ದ ಕಣದಲ್ಲಿ ಭತ್ತದ ರಾಶಿಗೆ ಸುಗ್ಗಿ ಪೂಜೆ ಸಲ್ಲಿಸಿದ್ರು. ನಂತರ ಮಾತನಾಡಿ, ಆತ್ಮಹತ್ಯೆ ದಾರಿ ಹಿಡಿಯದಂತೆ ಸಲಹೆ ನೀಡಿದ್ದಲ್ಲದೆ, ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂಬ ಭರವಸೆ ನೀಡಿದ್ರು.
Advertisement
Advertisement
ಸಿಎಂ ಆಗಮನಕ್ಕಾಗಿ ಇಡೀ ಗದ್ದೆಯನ್ನ ಸಿನಿಮೀಯ ಮಾದರಿ ಸಿಂಗರಿಸಲಾಗಿತ್ತು. ಬಣ್ಣ ಬಣ್ಣದ ಬಾವುಟ, ಬಣ್ಣ ಬಣ್ಣದ ಬಟ್ಟೆ ತಳಿರು ತೋರಣದಿಂದ ಗದ್ದೆ ಅಲಂಕರಿಸಲಾಗಿತ್ತು. ಸಿಎಂ ಸುಗ್ಗಿ ಪೂಜೆ ಸಲ್ಲಿಸುವ ವೇಳೆ ದೇವರ ಹಾಗೂ ಜಾನಪದ ಗೀತೆಗಳನ್ನ ಕಲಾವಿದರು ಹಾಡಿದ್ರು. ಸಿಎಂ ಎಚ್ ಡಿಕೆ ಭತ್ತ ಕೊಯ್ಲಿಗೆ ಅರಳುಕುಪ್ಪೆ ಗ್ರಾಮಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಇಡೀ ಊರಲ್ಲಿ ಸಂಭ್ರಮ ಮನೆ ಮಾಡಿತ್ತು. ತಮ್ಮ ಜಮೀನಿನಲ್ಲಿ ಸ್ವತಃ ಸಿಎಂ ಅವರೇ ನಾಟಿ ಮಾಡಿ, ಭತ್ತ ಕೊಯ್ಲು ಮಾಡುವ ವೇಳೆ ಭೂಮಿತಾಯಿ ಪೂಜೆ ಸಲ್ಲಿಸಿದ್ದು ಜಮೀನಿನ ಮಾಲೀಕರ ಸಂಭ್ರಮವನ್ನ ಇಮ್ಮಡಿಗೊಳಿಸಿತ್ತು. ಸಿಎಂ ಜೊತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್.ಪುಟ್ಟರಾಜು ಸೇರಿದಂತೆ ಹಲವು ರಾಜಕೀಯ ಮುಖಂಡರು ಪಾಲ್ಗೊಂಡಿದ್ರು.
Advertisement
ಸುಗ್ಗಿ ಪೂಜೆಯ ನಂತರ ವದೇ ಸಮುದ್ರ ಗ್ರಾಮಕ್ಕೆ ತೆರಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದ್ರು. ರೈತರಿಂದ ನಾವು ಎಂದು ಅನ್ನದಾತನಿಗೆ ಕೃತಜ್ಞತೆ ಸಲ್ಲಿಸುತ್ತಲೇ ರೈತನ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸುಗ್ಗಿ ಕಾರ್ಯದಲ್ಲೂ ಪಾಲ್ಗೊಂಡು ಆತ್ಮಸ್ಥೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv