ಪಂಚಕರ್ಮ ಚಿಕಿತ್ಸೆಯ ಬಳಿಕ ‘ಕೈ’ ಮುಖಂಡರ ವಿರುದ್ಧ ಸಿಎಂ ‘ಪಂಚತಂತ್ರ’ದ ಬಲೆ

Public TV
3 Min Read
Siddu hdk 2

ಬೆಂಗಳೂರು: ಕಳೆದ ಒಂದು ವಾರದಿಂದ ಮೈತ್ರಿ ಸರ್ಕಾರದ ದೋಸ್ತಿಗಳಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಬಹಿರಂಗವಾಗಿ ಹೇಳಿಕೆಯನ್ನು ನೀಡಲಾರಂಭಿಸಿದ್ದಾರೆ. ಸಚಿವ ಜಿ.ಟಿ.ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರೆ, ಮಾಜಿ ಸಿಎಂ ಸಿದ್ದರಾಮಯ್ಯ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪ್ರಯೋಜನವಿಲ್ಲ ಎಂದು ಹೇಳುವ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ಪಂಚಕರ್ಮ ಚಿಕಿತ್ಸೆ ಬಳಿಕ ಸಿಎಂ ಕುಮಾರಸ್ವಾಮಿ ಹೊಸ ಹುಮ್ಮಸ್ಸಿನಲ್ಲಿ ದೋಸ್ತಿ ನಾಯಕರ ವಿರುದ್ಧವೇ ‘ಪಂಚ್‍ತಂತ್ರ’ದ ದಾಳ ಪ್ರಯೋಗಿಸಲು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಪಂಚ್‍ತಂತ್ರ 1:
* ಸುಮಲತಾ ಜೊತೆ ಕಾಣಿಸಿಕೊಂಡ ಮಂಡ್ಯ ರೆಬೆಲ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ
* ಚಲುವರಾಯಸ್ವಾಮಿ ಮೇಲೆ ಕ್ರಮಗೊಳ್ಳಿ, ಆಮೇಲೆ ಮಾತಾಡಿ – ‘ಕೈ’ಗೆ ಒತ್ತಡ

cm a
ಚಲುವರಾಯಸ್ವಾಮಿ ಅಂಡ್ ಟೀಮ್ ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೊದಲ ಪಂಚ್ ಕೊಡಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಜೊತೆ ಸಭೆ ನಡೆಸಿದ ಚಲುವರಾಯಸ್ವಾಮಿ ಹಾಗೂ ಮಂಡ್ಯದ ಇತರೆ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಕೈ ಕೊಟ್ಟಿದ್ದಾರೆ. ಈಗ ಸುಮಲತಾ ಜೊತೆ ಬಹಿರಂಗವಾಗಿ ಕಾಣಿಸಿಕೊಂಡು ತಮ್ಮ ಬೆಂಬಲ ಯಾರಿಗೆ ಇತ್ತು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಿ ಆಮೇಲೆ ಮಾತನಾಡಿ ಎಂದು ಪಟ್ಟು ಹಿಡಿಯಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪಂಚ್‍ತಂತ್ರ 2:
* ಮಾಜಿ ಸಿಎಂ ಸಿದ್ದರಾಮಯ್ಯರನ್ನು ನಿಯಂತ್ರಣದಲ್ಲಿಡಿ
* ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತಂತ್ರ
ಮಂಡ್ಯ ಬೆಳವಣಿಗೆ, ಶಾಸಕರ ಪ್ರತ್ಯೇಕ ಸಭೆಯ ಯತ್ನ ಇದೆಲ್ಲದರ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದಾರೆ ಎನ್ನುವುದು ಕುಮಾರಸ್ವಾಮಿಯವರ ಅನುಮಾನ. ಸಹಜವಾಗಿಯೆ ಮೈತ್ರಿ ಗಟ್ಟಿಯಾಗಬೇಕಾದರೆ ಸಿದ್ದರಾಮಯ್ಯರನ್ನ ನಿಯಂತ್ರಣದಲ್ಲಿ ಇಡಿ ಎಂಬ ದೂರನ್ನ ಕಾಂಗ್ರೆಸ್ ಹೈಕಮಾಂಡ್ ಗೆ ತಲುಪಿಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

cm b

ಪಂಚ್‍ತಂತ್ರ 3:
* ಮೈತ್ರಿ ಸರ್ಕಾರ ಉಳಿಸಿಕೊಳ್ಳಬೇಕು ಎಂಬುದು ನಮ್ಮ ನಿಲುವು.
* ಮುನ್ನೆಚ್ಚರಿಕೆ ಕ್ರಮವಾಗಿ ಕಾಂಗ್ರೆಸ್ ಅಸಹಕಾರದ ಬಗ್ಗೆ ದೂರು
ರಾಜ್ಯ ಕಾಂಗ್ರೆಸ್ ನಾಯಕರುಗಳು ಲೋಕಸಭಾ ಫಲಿತಾಂಶದ ನಂತರ ಹೇಗೆ ನಡೆದುಕೊಳ್ಳುತ್ತಾರೆ ಅಂತ ಹೇಳೋದು ಕಷ್ಟ. ಆದ್ದರಿಂದ ಫಲಿತಾಂಶಕ್ಕೂ ಮುನ್ನವೇ ರಾಜ್ಯ ಕಾಂಗ್ರೆಸ್ ನಾಯಕರುಗಳ ವರ್ತನೆ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಗೆ ದೂರು ನೀಡಲು ನಿರ್ಧಾರ. ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಮೈತ್ರಿ ಸೂತ್ರ ಪಾಲಿಸಿದ್ರು? ಎಷ್ಟರ ಮಟ್ಟಿಗೆ ಅಸಹಕಾರ ತೋರಿದ್ರು? ಎಲ್ಲಿ ಏನೇನು ಸಮಸ್ಯೆ ಆಯ್ತು ಅನ್ನೋದನ್ನ ವಿವರವಾಗಿ ಕಾಂಗ್ರೆಸ್ ಹೈ ಕಮಾಂಡ್‍ಗೆ ದೂರು ನೀಡಲು ಸಿಎಂ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

cm c

ಪಂಚತಂತ್ರ 4:
* ಕಾಂಗ್ರೆಸ್ ಶಾಸಕರ ಒಗ್ಗಟ್ಟು ಮುರಿಯುವುದು.
* ಸಿದ್ದರಾಮಯ್ಯ ಗ್ಯಾಂಗ್ ಕಡೆಗಣಿಸಿ, ಉಳಿದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು.
ಸಮಾನ ಮನಸ್ಕ ಶಾಸಕರ ಹೆಸರಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಮುಂದಾದ ಶಾಸಕರ ಒಗ್ಗಟ್ಟನ್ನ ಮುರಿಯುವುದು. ಎಸ್.ಟಿ.ಸೋಮಶೇಖರ್, ಬೈರತಿ ಬ್ರದರ್ಸ್, ಆನೇಕಲ್ ಶಿವಣ್ಣ, ಅಖಂಡ ಶ್ರೀನಿವಾಸ ಮೂರ್ತಿಯಂತವರನ್ನ ಕಡೆಗಣಿಸಿ ಬಿಸಿ ಮುಟ್ಟಿಸುವುದು. ಇದೇ ವೇಳೆ ಅಜಯ್ ಸಿಂಗ್, ಮುನಿರತ್ನ, ಹ್ಯಾರಿಸ್, ಶಿವರಾಮ ಹೆಬ್ಬಾರ್‍ರಂತಹ ಶಾಸಕರನ್ನ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಕಾರ್ಯ ಮಾಡಿಸಿಕೊಡುವುದು.

ಪಂಚ್‍ತಂತ್ರ 5:
* ‘ಕೈ’ ವಿರುದ್ಧ ಪ್ರತಿದಾಳಿ ಮೂಲಕ ವಿವಾದದ ಕಾವು ಉಳಿಸಿಕೊಳ್ಳುವುದು.
* ‘ಲೋಕ’ ಅಸಹಕಾರದ ಮೂಲಕ ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸ್ತಿಲ್ಲ ಎಂದು ಬಿಂಬಿಸುವುದು
ಎಲ್ಲದಕ್ಕಿಂತ ಮುಖ್ಯವಾಗಿ ಸಿಎಂ ಬತ್ತಳಿಕೆಯಲ್ಲಿರುವ ಇನ್ನೊಂದು ಅಸ್ತ್ರವೆಂದರೆ ಎದ್ದಿರುವ ವಿವಾದದ ಕಾವನ್ನ ಹಾಗೇ ಉಳಿಸಿಕೊಳ್ಳುವುದು. ಮಂಡ್ಯದಲ್ಲಿ ಕಾಂಗ್ರೆಸಿಗರು ಕೈ ಕೊಟ್ಟರು, ಮೈಸೂರಲ್ಲಿ ಜೆಡಿಎಸ್ ನ್ನ ವಿಶ್ವಾಸಕ್ಕೆ ತಗೆದುಕೊಳ್ಳಲಿಲ್ಲ ಎಂಬ ವಿವಾದದ ಕಾವು ತಣ್ಣಗಾಗದಂತೆ ನೋಡಿಕೊಂಡು ಪರಸ್ಪರ ಮಾತಿನ ದಾಳಿ ಪ್ರತಿದಾಳಿ ಮೂಲಕ ವಿವಾದದ ಕಾವು ಹೆಚ್ಚಿಸುವುದು. ಆ ಮೂಲಕ ಕಾಂಗ್ರೆಸ್ ನವರೇ ಮೈತ್ರಿಯಲ್ಲಿ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಬಿಂಬಿಸುವುದು ಹೆಚ್ ಡಿಕೆ ಮಾಸ್ಟರ್ ಪ್ಲಾನ್ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *