ಮಡಿಕೇರಿ: ಸಿಎಂ ಸರ್ ಕೊಡಗನ್ನು ಯಾಕೆ ಅನಾಥ ಮಾಡಿದ್ರಿ, ನಿಮಗೆ ಕೊಡಗಿನ ನೀರು ಬೇಕು ನಮಗೆ ಅಭಿವೃದ್ಧಿ ಬೇಡ್ವಾ ಅಂತಾ ತನ್ನದೇ ಸ್ಟೈಲ್‍ನಲ್ಲಿ ರಾಜ್ಯ ಸರ್ಕಾರದ ಚಳಿ ಬಿಡಿಸಿದ್ದ ಮಡಿಕೇರಿ ಬಾಲಕನನ್ನು ಸಿಎಂ ಎಚ್ ಡಿಕೆ ಕುಮಾರಸ್ವಾಮಿ ಭೇಟಿ ಮಾಡಲಿದ್ದಾರೆ.
ಇಂದು ಸಂಜೆ 5 ಗಂಟೆಗೆ ಸಿಎಂ ಜೊತೆಗೆ ಕೊಡಗು ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಸಭೆಗೆ ಫತಹ್‍ನನ್ನು ಕರೆಸಲು ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಇತ್ತ ಇಂದು ಕುಮಾರಸ್ವಾಮಿ ಕೊಡಗಿಗೆ ಬರ್ತಿರೋ ಹಿನ್ನೆಲೆಯಲ್ಲಿ ಅವರಿಗೆ ಸ್ವಾಗತ ಕೋರಿ ಬಾಲಕ ಮತ್ತೊಂದು ವಿಡಿಯೋ ಮಾಡಿದ್ದಾನೆ. ಖುದ್ದು ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿ ಸಮಸ್ಯೆಗೆ ಸ್ಪಂದಿಸುತ್ತಿರುವುದು ಖುಷಿಯ ವಿಚಾರವಾಗಿದೆ ಎಂದಿದ್ದಾನೆ.
ಸಿಎಂ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಾರಿ ಸುಗಮಕ್ಕಾಗಿ ಹಲವು ಮರಗಳಿಗೆ ಕೊಡಲಿ ಏಟು ಬಿದ್ದಿದೆ. ಎಚ್‍ಡಿಕೆ ಇಂದು ಮತ್ತೆ ನಾಳೆ ಕೊಡಗು ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದ ವೇಳೆ ಹಾರಂಗಿ ಜಲಾಶಯ, ಭಾಗಮಂಡಲ ಹಾಗೂ ತಲಕಾವೇರಿಗಳಿಗೆ ಸಿಎಂ ಭೇಟಿ ನೀಡಲಿದ್ದಾರೆ. ಈ ವೇಳೆ ಸಿಎಂ ಸಂಚರಿಸುವ ಮಾರ್ಗದಲ್ಲಿ ಬೀಳುವ ಮತ್ತು ಅಪಾಯ ಇರುವಂತಹ ಮರಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ, ಅರಣ್ಯ ಇಲಾಖೆ ಅಧಿಕಾರಿಗಳು ಬೀಳುವ ಅಪಾಯದಲ್ಲಿರುವ ಮರಗಳ ಜೊತೆ ಚೆನ್ನಾಗಿರುವ ಮರಗಳಿಗೂ ಕೊಡಲಿ ಏಟು ಹಾಕಿದ್ದಾರೆ. ಮರಗಳ ಜೊತೆಗೆ ಸಣ್ಣ ಪುಟ್ಟ ಗಿಡಗಳಿಗೆ ಕೊಡಲಿ ಏಟು ಬದ್ದಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಇತ್ತ ಮರ ಕತ್ತರಿಸುವಂತೆ ಜಿಲ್ಲಾಧಿಕಾರಿ ಮಾಡಿರುವ ಆದೇಶವನ್ನು ಡಿಸಿ ಕಚೇರಿ ನಿರಾಕರಿಸಿದೆ. ಆದರೆ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.