ಮೈಸೂರು: ಇದು ದೇವರು ಕೊಟ್ಟ ಸರ್ಕಾರ. ದೇವರ ಆಶೀರ್ವಾದ ಇರುವವರೆಗೆ ಸಿಎಂಗೆ ಏನೂ ಮಾಡೋಕೆ ಆಗಲ್ಲ ಎಂದು ಸಚಿವ ಎಚ್ ಡಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ದೇವರು ಕೊಟ್ಟ ಸರ್ಕಾರ. ಹೀಗಾಗಿ ದೇವರ ಆಶೀರ್ವಾದ ಇರುವವರೆಗೆ ಸಿಎಂಗೆ ಏನೂ ಮಾಡೋಕೆ ಆಗಲ್ಲ. ದೇವರು ಎಲ್ಲಿಯವರೆಗೆ ಅಧಿಕಾರ ಕೊಡುತ್ತಾನೆ ಅಲ್ಲಿಯವರೆಗೆ ನಾವು ಇರುತ್ತೇವೆ. ಸರ್ಕಾರ ಬಿದ್ದರೆ ಸಿಎಂ ಅವರಿಗೆ ನಷ್ಟ ಇಲ್ಲ. ಜನರಿಗೆ ನಷ್ಟ ಆಗೋದು. ಅಧಿಕಾರದಲ್ಲಿ ಇರುವವರೆಗೆ ಜನರ ಸಿಎಂ ಜನರ ಸೇವೆ ಮಾಡುತ್ತಾರೆ ಎಂದು ಹೇಳಿದರು.
ಇಂದು ಕೂಡ ಸರ್ಕಾರಕ್ಕೆ ಏನೂ ಆಗಲ್ಲ ನೋಡುತ್ತಾ ಇರಿ. ದೇವರ ಆಶೀರ್ವಾದ ಸಿಎಂ ಅವರ ಮೇಲೆ ಇದೆ. ಮಾಜಿ ಪ್ರಧಾನಿ ದೇವೇಗೌಡರ ಹಾಗೂ ಸಿಎಂ ಅವರ ಬಗ್ಗೆ ಮಾತಾನಾಡಲಿಲ್ಲ ಎಂದರೆ ಕೆಲವರಿಗೆ ಊಟ ಸೇರಲ್ಲ. ಹೀಗಾಗಿ ಅವರ ಬಗ್ಗೆ ಮಾತನಾಡುತ್ತಾರೆ. ನನ್ನ ಬಗ್ಗೆ ಆರೋಪ ಮಾಡುತ್ತಾರೆ. 5 ರೂ. ಹಣವನ್ನು ಕೂಡ ನಾನು ಯಾವ ಇಲಾಖೆಗೂ ಬಿಡುಗಡೆ ಮಾಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ. ನನ್ನ ಮೇಲೆ ಮಾಡುತ್ತಿರುವ ಆರೋಪವನ್ನು ಯಾರಾದರೂ ಸಾಬೀತು ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಚಾಮುಂಡೇಶ್ವರಿ ಬೆಟ್ಟಕ್ಕೆ ಬಂದ ರೇವಣ್ಣ ಅವರು ಸರ್ಕಾರದ ಭದ್ರತೆ ನಡುವೆ ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಕಳೆದ ಶುಕ್ರವಾರವೂ ಕೂಡ ಚಾಮುಂಡಿ ಬೆಟ್ಟಕ್ಕೆ ರೇವಣ್ಣ ಅವರು ಬಂದಿದ್ದರು.
ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಡಗರ ಜೋರಾಗಿದ್ದು, ಎರಡನೇ ಆಷಾಢ ಶುಕ್ರವಾರದ ಪೂಜಾ ಕೈಂಕರ್ಯಗಳು ಆರಂಭವಾಗಿದೆ. ಶ್ರೀ ಚಾಮುಂಡೇಶ್ವರಿ ದೇವಿ ವಿಶೇಷ ಅಲಂಕಾರ, ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದಾರೆ. ದೇವಾಲಯದ ಒಳ, ಹೊರಾವರಣ ಭಕ್ತಾದಿಗಳ ಕಣ್ಮನ ಸೆಳೆಯುತ್ತಿದೆ. ನಸುಕಿನಲ್ಲೇ ದೇವಾಲಯದಲ್ಲಿ ಭಕ್ತರ ಸರತಿ ಸಾಲಿನಲ್ಲಿ ಬಂದು ದೇವಿಯ ದರ್ಶನಕ್ಕೆ ಮುಗಿಬಿದ್ದಿದ್ದಾರೆ.
ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗದಂತೆ ವ್ಯಾಪಕ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದ್ದು, ಚಾಮುಂಡಿ ಬೆಟ್ಟಕ್ಕೆ ಬರುವ ಎಲ್ಲ ರೀತಿಯ ಖಾಸಗಿ ವಾಹನಗಳ ಮೇಲೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗಾಗಿ ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಉಚಿತ ಬಸ್‍ಗಳ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ.