ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್(DK Shivakumar) ಅವರು ಏಷ್ಯನ್ ಗೇಮ್ಸ್‌ನ (Asian Games) ಮಹಿಳೆಯರ 4×400 ಮೀಟರ್ ರಿಲೇ ಓಟದಲ್ಲಿ ಚಿನ್ನ ಹಾಗೂ ಮಿಶ್ರ 4×400 ಮೀಟರ್ ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆದ್ದ ಕರ್ನಾಟಕದ ಖ್ಯಾತ ಓಟಗಾರ್ತಿ ಎಂ.ಆರ್. ಪೂವಮ್ಮ(MR Poovamma) ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.
ಈ ಗಮನಾರ್ಹ ಸಾಧನೆಯನ್ನು ಶ್ಲಾಘಿಸಿದ ಅವರು, “ಕರ್ನಾಟಕದ ಕ್ರೀಡಾಪಟುಗಳ ಪ್ರತಿಭೆಗೆ ಬೆಂಬಲ ನೀಡಲು ಹಾಗೂ ಅಥ್ಲೀಟ್‌ಗಳು ಇನ್ನಷ್ಟು ಉನ್ನತ ಎತ್ತರಕ್ಕೆ ಬೆಳೆಯಲು ಶಕ್ತಿ ತುಂಬಲು ಸರ್ಕಾರ ಬದ್ಧವಾಗಿದೆ” ಎಂದು ಪುನರುಚ್ಚರಿಸಿದರು.
ಪದಕ ಗೆದ್ದ ಬಳಿಕ ಪೂವಮ್ಮ ಶುಕ್ರವಾರ ಮಂಗಳೂರಿಗೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಆರ್. ಪೂವಮ್ಮ, ದೇಶಕ್ಕೆ ಮೆಡಲ್ ತಂದುಕೊಟ್ಟಿರುವುದು ನನಗೆ ತುಂಬಾ ಖುಷಿ ನೀಡಿದೆ. ಆದರೆ, ರಾಜ್ಯ ಸರ್ಕಾರದಿಂದ ನಿರೀಕ್ಷಿತ ಪ್ರೋತ್ಸಾಹ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸರ್ಕಾರದಿಂದ ಕ್ರೀಡಾಪಟುಗಳಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂದು ಅವರು ಬೇಸರ ಹೊರಹಾಕಿದರು.
ಬೇರೆ ರಾಜ್ಯ ಸರ್ಕಾರಗಳು ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಿಗೆ 3 ಕೋಟಿ ರೂ.ವರೆಗೆ ಬಹುಮಾನ ನೀಡುತ್ತವೆ. ಆದರೆ, ಕರ್ನಾಟಕ ಸರ್ಕಾರ 35 ಲಕ್ಷ ರೂ. ನೀಡುತ್ತಿದೆ. ಬಹುಮಾನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಇದರಿಂದ ನಮ್ಮ ರಾಜ್ಯದ ಎಲ್ಲಾ ಕ್ರೀಡಾಪಟುಗಳಿಗೆ ಸಹಕಾರಿಯಾಗುತ್ತದೆ. ಮುಖ್ಯಮಂತ್ರಿ ಅವರಿಗೆ ಈ ಮೂಲಕ ಒತ್ತಾಯಿಸುತ್ತೇನೆ. ರಾಜ್ಯ ಸರ್ಕಾರ ಎಲ್ಲಾ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಎಂ.ಆರ್. ಪೂವಮ್ಮ ಹೇಳಿದ್ದರು.
2 ಪದಕ:
ಮಹಿಳೆಯರ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಕಿರಣ್ ಪಹಲ್, ಪ್ರಾಚಿ ಚೌಧರಿ ಮತ್ತು ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತದ ತಂಡ 3:29.69 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು. 4×400 ಮೀಟರ್ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಮನು ಟಿ.ಎಸ್, ವಿಶಾಲ್ ಟಿ.ಕೆ ಮತ್ತು ವಿಥ್ಯಾ ರಾಮರಾಜ್ ಅವರೊಂದಿಗೆ ಓಡಿ ಪೂವಮ್ಮ ಬೆಳ್ಳಿ ಪದಕ ಗೆದ್ದಿದ್ದಾರೆ.


