– ಕೇಂದ್ರದ ಬಜೆಟ್ ಕರ್ನಾಟಕಕ್ಕೆ ನಿರಾಶೆ ತಂದಿದೆ ಎಂದ ಗೃಹ ಸಚಿವ
ಬೆಂಗಳೂರು: ಸಿಎಂ ಬದಲಾವಣೆ ಹೇಳಿಕೆಗೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್‌ಗೆ ಗೃಹ ಸಚಿವ ಜಿ.ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ. ಅಶೋಕ್ ಯಾವಾಗ ಭವಿಷ್ಯ ಹೇಳೋದನ್ನ ಕಲಿತರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
Advertisement
ನವೆಂಬರ್‌ನಲ್ಲಿ ಸಿದ್ದರಾಮಯ್ಯ ಸಿಎಂ ಅವಧಿ ಮುಕ್ತಾಯ ಎಂಬ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಯಾವಾಗ ಭವಿಷ್ಯ ಹೇಳೋದನ್ನು ಕಲಿತರು ಎಂದು ನಮಗೆ ಗೊತ್ತಿಲ್ಲ. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ. ನಾವೆಲ್ಲ 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ ಅಂತ ಅಂದುಕೊಂಡಿದ್ದೇವೆ. ಸಿಎಲ್‌ಪಿ ಸಭೆಯಲ್ಲಿ ಸಿಎಂ ಆಯ್ಕೆ ಆಯ್ತು. ಆ ಸಂದರ್ಭದಲ್ಲಿ ಅವರು ಎರಡೂವರೆ ವರ್ಷ ಮಾತ್ರ ಇರುತ್ತಾರೆ ಎಂದು ನಮಗೇನೂ ಹೈಕಮಾಂಡ್ ಹೇಳಿಲ್ಲ. ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಅಂದುಕೊಂಡಿದ್ದೇವೆ. ಈ ಮಧ್ಯೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಬಿ.ಆರ್.ಪಾಟೀಲ್ ರಾಜೀನಾಮೆ ವಿಚಾರವಾಗಿ ಮಾತನಾಡಿ, ಅವರು ಯಾಕೆ ರಾಜೀನಾಮೆ ಕೊಟ್ರು ಅಂತ ಗೊತ್ತಿಲ್ಲ. ಯಾಕೆ ರಾಜೀನಾಮೆ ಕೊಟ್ರು ಅಂತ ಸಿಎಂಗೆ ಹೇಳಿರುತ್ತಾರೆ. ಅವರಿಗೆ ಏನು ಅಸಮಾಧಾನ ಅಂತ ಗೊತ್ತಿಲ್ಲ. ರಾಜೀನಾಮೆ ಕೊಟ್ಟ ಬಗ್ಗೆಯೂ ಗೊತ್ತಿಲ್ಲ ಎಂದು ಹೇಳಿದರು.
Advertisement
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಮಸೂದೆ ಬಗ್ಗೆ ಪ್ರತಿಕ್ರಿಯಿಸಿ, ಮಸೂದೆ ಮಾಡಿದ ಮೇಲೆ ಕೋರ್ಟ್ನಲ್ಲಿ ತಡೆ ಆಗಬಾರದು. ಈಗ ಇರುವ ಬೇರೆ ಬೇರೆ ಕಾನೂನುಗಳನ್ನು ಲಿಂಕ್ ಮಾಡಿ ಹೊಸ ಮಸೂದೆ ಮಾಡಲು ಅಧಿಕಾರಿಗಳಿಗೆ ಸಿಎಂ ಹೇಳಿದ್ದಾರೆ. ಆದಷ್ಟು ಬೇಗ ಮಸೂದೆಯ ಕರಡು ರಚನೆ ಮುಗಿದರೆ ರಾಜ್ಯಪಾಲರ ಒಪ್ಪಿಗೆಗೆ ಕಳಿಸಲಾಗುತ್ತದೆ ಎಂದರು.
Advertisement
ಈ ಬಾರಿಯ ಕೇಂದ್ರದ ಬಜೆಟ್ ಕರ್ನಾಟಕಕ್ಕೆ ನಿರಾಶೆ ತಂದಿದೆ. ಕರ್ನಾಟಕಕ್ಕೆ ಯಾವುದೇ ಕಾರ್ಯಕ್ರಮ ಕೊಟ್ಟಿಲ್ಲ. ಪ್ರಮುಖ ಬೇಡಿಕೆಗಳನ್ನು ಕೇಂದ್ರದ ಮುಂದೆ ಇಟ್ಟಿದ್ದೆವು. ಆಶ್ರಯ ಮನೆಗಳಿಗೆ ಹೆಚ್ಚಿನ ಹಣ ಕೇಳಿದ್ದೆವು. ಸಮಾಜ ಕಲ್ಯಾಣ ಇಲಾಖೆಗೆ ಇನ್ನೂ ಹೆಚ್ಚಿನ ಹಣ ಕೇಳಿದ್ದೆವು. ಕೇಂದ್ರದ ಯೋಜನೆಗಳಲ್ಲಿ ಹೆಚ್ಚಿನ ಅನುದಾನ ಕೇಳಿದ್ದೆವು. ಐಐಎಂ, ಐಐಟಿಗಳನ್ನು ರಾಜ್ಯಕ್ಕೆ ಕೊಡುವಂತೆ ಸಹ ಕೇಳಿದ್ದೆವು. ನೀರಾವರಿ ಯೋಜನೆಗಳಲ್ಲಿ ಭದ್ರ ಮೇಲ್ದಂಡೆಗೆ 5300 ಕೋಟಿ ರೂ. ಕೊಡೋದಾಗಿ ಕಳೆದ ಸಲ ಘೋಷಣೆ ಮಾಡಿದ್ದರು. ಈ ಸಲ ಅದರ ಪ್ರಸ್ತಾಪವೇ ಮಾಡಿಲ್ಲ ಎಂದು ಗುಡುಗಿದರು.
ಮೇಕೆದಾಟು ಪ್ರಸ್ತಾಪ ಮಾಡಿಲ್ಲ. ಬೆಂಗಳೂರು ಅಭಿವೃದ್ಧಿಗೆ ಏನೂ ಕೊಟ್ಟಿಲ್ಲ. ಪೆರಿಫೆರಲ್, ಸಿಆರ್‌ಆರ್ ಯೋಜನೆಗಳಿಗೂ ಏನೂ ಕೊಟ್ಟಿಲ್ಲ. ಸಿಎಂ ಹೇಳಿದ ಹಾಗೆ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ಚೊಂಬು ಕೊಟ್ಟಿದೆ. ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಸಹಾಯ ಆಗಿಲ್ಲ ಎಂದರು.
ನಮ್ಮದು ಕೃಷಿ ಪ್ರಧಾನ ದೇಶ. ಇದನ್ನು ಪರಿಗಣಿಸಿ ಕೃಷಿ ಉತ್ಪಾದನೆ ಹೆಚ್ಚಿಸುವ ಕೃಷಿಕರಿಗೆ ಸಾಲ ಕೊಡುವ ಪ್ರಸ್ತಾಪ ಮಾಡಿಲ್ಲ. ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ತಿರಸ್ಕಾರ ಮಾಡಲಾಗಿದೆ. ಕೃಷಿಗೆ ಉತ್ತೇಜನ ಕೊಟ್ಟಿಲ್ಲ ಎಂದು ದೂರಿದರು.
ಇಡೀ ದೇಶಕ್ಕೆ 50.68 ಲಕ್ಷ ಕೋಟಿ ರೂ. ಬಜೆಟ್ ಕೊಟ್ಟಿದ್ದಾರೆ. ಒಂದರಲ್ಲಿ 15 ಲಕ್ಷ ಕೋಟಿ ರೂ.ಗೆ ಹೆಚ್ಚು ಸಾಲ ತೋರಿಸಲಾಗಿದೆ. 200 ಲಕ್ಷ ರೂ.ಗೆ ಹೆಚ್ಚು ಸಾಲ ಇದೆ ಅದನ್ನು ತೀರಿಸಿಕೊಳ್ಳಲು ಪೂರಕ ಮಾಡಿಕೊಂಡಿದ್ದಾರೆ ಎಂದರು.
ದೆಹಲಿ ಭೇಟಿ ಬಗ್ಗೆ ಮಾತನಾಡಿದ ಅವರು, ನಾನು ದೆಹಲಿಗೆ ಹೋಗಬೇಕು ಅಂತ ಅಂದುಕೊಂಡಿದ್ದೇನೆ. ಇನ್ನೂ ಯಾವಾಗ ಅಂತ ನಿಗದಿಯಾಗಿಲ್ಲ. ಆದ್ರೆ ದೆಹಲಿಗೆ ನಾನು ರಾಜಕೀಯ ಕಾರಣಕ್ಕೆ ಹೋಗ್ತಿಲ್ಲ. ಇಲಾಖೆ ಕೆಲಸಗಳಿಗೆ ದೆಹಲಿಗೆ ಹೋಗಬೇಕಿದೆ. ರಾಜಕೀಯ ಕಾರಣಕ್ಕೆ ಹೋಗಲ್ಲ, ಯಾಕಂದ್ರೆ ಇಲ್ಲಿಗೇ ನಮ್ಮ ಎಐಸಿಸಿ ಅಧ್ಯಕ್ಷರು, ಉಸ್ತುವಾರಿಗಳು ಬರ್ತಾರೆ. ಆಗಲೇ ಏನಾದ್ರೂ ಇದ್ದರೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.