ಸಿಎಂ ಕುರ್ಚಿಗಾಗಿ ಟೆಲಿಫೋನ್ ಕದ್ದಾಲಿಕೆ ಮಾಡಿಲ್ಲ: ಎಚ್‍ಡಿಕೆ

Public TV
2 Min Read
HDK

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಫೋನ್ ಕದ್ದಾಲಿಕೆ ಕುರಿತು ಬಾರೀ ಚರ್ಚೆ ನಡೆಯುತ್ತಿದ್ದು, ಈ ಕುರಿತು ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಫೋನ್ ಕದ್ದಾಲಿಕೆ ಮಾಡಿಲ್ಲ. ಮುಖ್ಯಮಂತ್ರಿ ಅಧಿಕಾರ ಶಾಶ್ವತವಲ್ಲ ಎಂದು ಪದೇ ಪದೆ ಹೇಳುತ್ತಿದ್ದವನು ನಾನು. ಈ ಕುರ್ಚಿಗಾಗಿ ಟೆಲಿಫೋನ್ ಕದ್ದಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಮೇಲಿನ ಆರೋಪವನ್ನು ಕುಮಾರಸ್ವಾಮಿ ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ. ಇಂದು ಬೆಳಗ್ಗೆ ಫೋನ್ ಕದ್ದಾಲಿಕೆ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಸಿಎಂ, ಎಚ್.ವಿಶ್ವನಾಥ್ ಸೇರಿದಂತೆ ಹಲವರು ಈ ಕುರಿತು ಪ್ರತಿಕ್ರಿಯಿಸಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿ, ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಫೋನ್ ಟ್ಯಾಪಿಂಗ್ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಬಳಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, 6 ಸಾವಿರ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ. ಸುಮಾರು 34 ಜಿಬಿಯಷ್ಟು ಆಡಿಯೋ ರೆಕಾರ್ಡ್ ಆಗಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದ್ದು, ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

CM BSY

ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ದೊಡ್ಡವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಈಗಾಗಲೇ ಪ್ರಾಥಮಿಕ ತನಿಖೆ ನಡೆದಿದೆ. ಸಂದೀಪ್ ಪಾಟೀಲ್ ಹಿರಿಯ ಪೊಲೀಸ್ ಅಧಿಕಾರಿಯ ಸೂಚನೆಯ ಮೇರೆಗೆ ಫೋನ್ ಕದ್ದಾಲಿಕೆ ನಡೆದಿದೆ ಎಂದು ವರದಿ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಸರ್ಕಾರ ಬೀಳಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಕರೆಗಳನ್ನು ಕದ್ದಾಲಿಸಲಾಗಿದೆ ಎನ್ನುವ ಗಂಭೀರ ಆರೋಪ ಎಚ್‍ಡಿಕೆಯ ಮೇಲೆ ಬಂದಿದೆ. ಮಾಧ್ಯಮಗಳ ಜೊತೆ ಮಾತನಾಡಿದ್ದ ಬಿಜೆಪಿ ಮುಖಂಡ ಆರ್.ಅಶೋಕ್, ಕುಮಾರಸ್ವಾಮಿ ಅವಧಿಯಲ್ಲಿ ರಾಜ್ಯ ನಾಯಕರ ಫೋನ್ ಕರೆ ಟ್ಯಾಪ್ ಮಾಡಲಾಗುತ್ತಿದೆ ಎಂದು ಹೇಳಿದ್ದೆ. ಅದು ಈಗ ನಿಜವಾಗಿದೆ. ಸಿದ್ದರಾಮಯ್ಯನವರ ಮೇಲೆ ಕುಮಾರಸ್ವಾಮಿ ಅವರಿಗೆ ನಂಬಿಕೆ ಇರಲಿಲ್ಲ. ಹೀಗಾಗಿ ಅವರ ಫೋನನ್ನು ಕದ್ದಾಲಿಸಲಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

ashok

ಇದೇ ವೇಳೆ ಅನರ್ಹ ಶಾಸಕ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ದೊಡ್ಡ ಮಟ್ಟದಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರ ಪಿಎ ವೆಂಕಟೇಶ್ ಎಂಬವರ ಫೋನ್ ಕದ್ದಾಲಿಕೆ ಮಾಡಲಾಗಿದೆ. ರೆಬೆಲ್ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ. ಹೀಗೆ ಕದ್ದಾಲಿಕೆ ಮಾಡಿ ರೆಬೆಲ್ ಶಾಸಕರನ್ನು ಸಿಎಂ (ಹೆಚ್‍ಡಿಕೆ) ಕಚೇರಿಯಿಂದ ಬ್ಲಾಕ್ ಮೇಲ್ ಮಾಡಲಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದವನ ದೂರವಾಣಿಯನ್ನು ಜೆಡಿಎಸ್ ಮುಖ್ಯಮಂತ್ರಿಯೇ ಕದ್ದಾಲಿಕೆ ಮಾಡಿದ್ದಾರೆ. ನಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

vishwanath

ವಿಶ್ವನಾಥ್ ಮಾತನಾಡಿರುವುದು ಸಿಕ್ಕಿದೆ ಚೀ ಚೀ ಕೇಳಿಸಿಕೊಳ್ಳಲು ಆಗಲ್ಲ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದರು. ನಾನು ಮೊಬೈಲ್‍ನಲ್ಲಿ ಸಾವಿರ ಮಾತನಾಡುತ್ತೇನೆ. ಹೀಗೆ ಮಾತಾಡಬೇಕು ಎಂದು ಹೇಳೋಕೆ ನೀವು ಯಾರು? ಬೆಂಗಳೂರು ಪೊಲೀಸ್ ಆಯುಕ್ತರ ಮೂಲಕ ದೂರವಾಣಿಯೆ ಕದ್ದಾಲಿಕೆ ಮಾಡಲಾಗಿದೆ. ರಾಜ್ಯದ ಸಿಎಂ ಆಗಿ ಹೆಚ್‍ಡಿಕೆ ಎಲ್ಲಾ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹಳ್ಳಿ ಕಡೆ ಮನೆಯವರಿಗೆ ಮನೆಯವರೇ ಮದ್ದು ಹಾಕುತ್ತಾರೆ ಎನ್ನುವ ಮಾತಿದೆ ಇದು ಅದೇ ಕಥೆ ಎಂದು ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *