– ಎಂಟಿಬಿಯಂತಹ ಶಾಸಕರು ಆಯ್ಕೆ ಆಗಬೇಕು
– ಯಾವುದೇ ಕೆಲಸ ಮಾಡಿಕೊಡಲು ಸಿದ್ಧ
ಬೆಂಗಳೂರು: ಎಂಟಿಬಿ ನಾಗರಾಜ್ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಭರವಸೆ ನೀಡಿದ್ದಾರೆ.
ಹೊಸಕೋಟೆಯಲ್ಲಿ ಏತ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ನಂತರ ಮಾತನಾಡಿದರು. ಕೇವಲ ಎಂಟಿಬಿ ಕ್ಷೇತ್ರ ಮಾತ್ರವಲ್ಲ ಆದ್ಯತೆ ಮೇರೆಗೆ ಎಲ್ಲ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡಲಾಗುವುದು. ಎಂಟಿಬಿಯವರಿಗೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಕೊಟ್ಟಿದ್ದರೆ ಮೈತ್ರಿ ಸರ್ಕಾರದಲ್ಲಿ ಅವರು ರಾಜೀನಾಮೆ ನೀಡುವ ಪ್ರಸಂಗವೇ ಬರುತ್ತಿರಲಿಲ್ಲ. ಎಂಟಿಬಿ ಯಾವುದೇ ಪಕ್ಷದಿಂದ ನಿಲ್ಲಲಿ ಅಥವಾ ಪಕ್ಷೇತರ ಅಭ್ಯರ್ಥಿಯಾದರೂ ಪರವಾಗಿಲ್ಲ. ಅವರಂತಹ ಶಾಸಕರು ಆಯ್ಕೆ ಆಗಬೇಕು ಎಂದು ಜನರಲ್ಲಿ ಮನವಿ ಮಾಡಿದರು.
Advertisement
Advertisement
ಇಂತಹ ಪ್ರಮಾಣಿಕ ವ್ಯಕ್ತಿ ಶಾಸಕನಾಗಬೇಕು. ಯಡಿಯೂರಪ್ಪ ಮಾತನಾಡಿದರೆ ಹಿಂದೆ ಸರಿಯುವ ವ್ಯಕ್ತಿ ಅಲ್ಲ. ಎಂಟಿಬಿ ಅವರೇ ಇನ್ನು ಹತ್ತು ಕೆಲಸಗಳನ್ನು ಕೇಳಿ ಎಲ್ಲ ಕೆಲಸಗಳನ್ನು ಮಾಡಿಕೊಡುವೆ. ಇದೇ ವೇಳೆ ಮತ್ತೇನು ಬೇಕಣ್ಣ ಎಂದು ಸಿಎಂ ಸಭಿಕರನ್ನು ಪ್ರಶ್ನಿಸಿದರು. ಸಿಎಂ ಮಾತು ಕೇಳಿ ಕೇಕೆ ಹಾಕಿ ಸಭಿಕರು ಸಂತಸಪಟ್ಟರು. ಶಿಕಾರಿಪುರದಂತೆ ಹೊಸಕೋಟೆ ಕ್ಷೇತ್ರ ಮಾದರಿಯಾಗಬೇಕು. ಇದಕ್ಕೆ ನಾನು ಯಾವುದೇ ಕೆಲಸ ಮಾಡಿಕೊಡಲು ಸಿದ್ಧ ಎಂದು ಭರವಸೆ ನೀಡಿದರು.
Advertisement
ಹೊಸಕೋಟೆ ನಗರಕ್ಕೆ ಮೆಟ್ರೋ ವಿಸ್ತರಣೆ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಮೆಟ್ರೋ ಯೋಜನೆ ವಿಸ್ತರಣೆಗೆ ಅನುಮತಿ ಕೊಡಿಸುತ್ತೇನೆ. ಪುನಃ ಹೊಸಕೋಟೆಗೆ ಬಂದು ಮೆಟ್ರೋ ಯೋಜನೆ ವಿಸ್ತರಣೆಗೆ ಶಂಕುಸ್ಥಾಪನೆ ಮಾಡುತ್ತೇನೆ. ಹೊಸಕೋಟೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾತಿಗೆ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
Advertisement
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ರಾಜೀನಾಮೆ ನೀಡಿದರೂ ಹೊಸಕೋಟೆ ಅಭಿವೃದ್ಧಿ ಬಗ್ಗೆ ಎಂಟಿಬಿ ನಾಗರಾಜ್ ಗೆ ವಿಶೇಷ ಪ್ರೇಮ ಇದೆ. ನಾಗರಾಜ್ ರವರಿಗೆ ಶಾಸಕ ಸ್ಥಾನಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ ಅಂತಹವರು. ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಎಂಟಿಬಿ ಶ್ರಮಿಸಿದ್ದಾರೆ. ಬಿಎಸ್‌ವೈ ಮೂರೂವರೆ ವರ್ಷ ಆಡಳಿತ ಮಾಡುತ್ತಾರೆ. ನಮ್ಮದು ಅಲ್ಲಾಡಿಸುವ ಸರ್ಕಾರವಲ್ಲ. ನಾವು ಕನಕಪುರ ಬಂಡೆ ಅಲ್ಲ, ನಾವು ಅಲ್ಲಾಡಲ್ಲ, ಮೂರುವರೆ ವರ್ಷ ಪೂರ್ಣಗೊಳಿಸ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸಕೋಟೆಯಲ್ಲಿ ಸಿಎಂ ಯಡಿಯೂರಪ್ಪ ಅವರು 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ವೇಳೆ 800 ಕೆ.ಜಿ. ಬೃಹತ್ ಸೇಬಿನ ಹಾರವನ್ನು ಕ್ರೇನ್ ಮುಖಾಂತರ ಸಿಎಂ ಯಡಿಯೂರಪ್ಪನವರಿಗೆ ಹಾಕಲಾಯಿತು.
ಸಿಎಂ ಕಾರ್ಯಕ್ರಮಕ್ಕೆ ಪ್ರತಿಭಟನೆ ಬಿಸಿ ತಟ್ಟಿತ್ತು. ಹೊಸಕೋಟೆಗೆ ಕಾವೇರಿ ನೀರು, ಮೆಟ್ರೋ ಮಂಜೂರು ಮಾಡುವಂತೆ ಸ್ಥಳೀಯ ನಿವಾಸಿಗಳಿಂದ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.