ಬೆಂಗಳೂರು: ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಕ್ಷೇತ್ರದ ಜನ ತಮ್ಮ ಅಭಿವೃದ್ಧಿಯ ಮನವಿಯನ್ನು ಪುರಸ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೇಳಿದ್ದಾರೆ.
ಕೆಆರ್ ಪೇಟೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸುದಿನವಾಗಿದೆ ಎಂದರು.
ಕೆಆರ್ ಪೇಟೆ ಕ್ಷೇತ್ರಕ್ಕೆ ಹೋದ ಸಂದರ್ಭದಲ್ಲಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದೆವು. ಅದೇನೆಂದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಹಾಗೆಯೇ ತಮ್ಮ ಊರಿನ ಮಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಅವರಲ್ಲಿ ತಮ್ಮ ತಾಲೂಕಿನ ಅಭಿವೃದ್ಧಿ ಮಾಡಬೇಕೆಂಬ ಕನಸು ಇತ್ತು. ಅವರ ಕನಸನ್ನು ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಮೂಲಕ ಪ್ರತಿಯೊಬ್ಬ ಮತದಾರರ ಮನೆ-ಮನೆಗೆ ಮತ್ತು ಮನ-ಮನಕ್ಕೆ ಮುಟ್ಟುವಂತಹ ರೀತಿಯಲ್ಲಿ ಯಶಸ್ವಿಯಾಗಿ ಪ್ರಚಾರ ಮಾಡಿದ್ದೆವು ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ
ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಶಾಸಕ ಪ್ರೀತಂ ಗೌಡ, ಶಂಕರ್ ಗೌಡ ಪಾಟೀಲ್ ಮುಂತಾದ ನಮ್ಮ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಮನವಿ ಮಾಡಿದೆವು. ಇದೊಂದು ಬಾರಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂಬ ಮನವಿಯನ್ನು ಮತದಾರರ ಮುಂದೆ ಇಟ್ಟಿದ್ದೆವು. ಹಾಗೆಯೇ ಇದೊಂದು ಬಾರಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಅಭಿವೃದ್ಧಿಗೆ ತಾವು ಬೆಂಬಲ ಕೊಡಬೇಕು ಎಂಬ ನಮ್ಮ ರಿಕ್ವೆಸ್ಟನ್ನು ಕ್ಷೇತ್ರದ ಮತದಾರರು ಪುರಸ್ಕರಿಸಿದ್ದು, ನಾರಾಯಣ ಗೌಡರಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಸಂತಸ ಹಂಚಿಕೊಂಡರು. ಇದನ್ನೂ ಓದಿ: ಅಭಿವೃದ್ಧಿಯೇ ನನ್ನ ಗುರಿ, ತಾಲೂಕಿನ ಕನಸನ್ನು ನನಸು ಮಾಡ್ತೀನಿ: ನಾರಾಯಣ ಗೌಡ