ಬೆಂಗಳೂರು: ಸ್ವಿಟ್ಜರ್ಲೆಂಡ್‍ನ ದಾವೋಸ್ ನಲ್ಲಿ ವಿಶ್ವ ಆರ್ಥಿಕ ಶೃಂಗ ಸಭೆಯನ್ನು ಯಶಸ್ವಿಯಾಗಿ ಮುಗಿಸಿ ಸಿಎಂ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಸ್ವಿಟ್ಜರ್ಲೆಂಡ್‍ನಿಂದ ದುಬೈ ಮಾರ್ಗವಾಗಿ ಸಿಎಂ ಮತ್ತು ನಿಯೋಗವು ಇಂದು ಮಧ್ಯಾಹ್ನ 3.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. ಇದೇ ತಿಂಗಳ 20ರಿಂದ 23ರವರೆಗೆ ನಾಲ್ಕು ದಿನಗಳ ಕಾಲ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಸಿಎಂ ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಮೂವರು ಐಎಎಸ್ ಅಧಿಕಾರಿಗಳೂ ಸೇರಿದಂತೆ ಒಟ್ಟು 10 ಜನರ ನಿಯೋಗ ದಾವೋಸ್ ಶೃಂಗ ಸಭೆಯಲ್ಲಿ ಭಾಗವಹಿಸಿತ್ತು.
4 ದಿನಗಳ ಕಾಲ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ 35 ಜಾಗತಿಕ ಉದ್ಯಮಿಗಳ ಜೊತೆ ಸಿಎಂ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಸಂವಾದ ನಡೆಸಿದ್ದರು. ಬೆಂಗಳೂರು ಸೇರಿದಂತೆ ಕರ್ನಾಟಕದ ಮೆಟ್ರೋಪಾಲಿಟನ್ ನಗರಗಳು, ಟು ಟೈರ್ ನಗರಗಳಲ್ಲಿ ವಿದೇಶಿ ಉದ್ಯಮಗಳಿಗೆ ಇರುವ ಪೂರಕ ವಾತಾವರಣ, ಉದ್ದಿಮೆಗೆ ಅಗತ್ಯ ಇರುವ ಸ್ಥಳೀಯ ಮೂಲಭೂತ ಸೌಕರ್ಯಗಳು, ಸರಕಾರದಿಂದ ನೀಡಲಾಗುವ ಸೌಕರ್ಯಗಳು, ವಿನಾಯ್ತಿಗಳ ಬಗ್ಗೆ ಜಾಗತಿಕ ಉದ್ಯಮಿಗಳಿಗೆ ಸಿಎಂ ನೇತೃತ್ವದ ನಿಯೋಗ ಮನವರಿಕೆ ಮಾಡಿಕೊಟ್ಟಿದೆ.
ರಾಜ್ಯದ ನಿಯೋಗದ ಮುಖ್ಯ ಆದ್ಯತೆ ಇದ್ದಿದ್ದೇ ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕಲಬುರಗಿಗಳಂತಹ ಟುಟೈರ್ ಸಿಟಿಗಳಲ್ಲಿ ವಿದೇಶಿ ಹೂಡಿಕೆದಾರರನ್ನು ಸೆಳೆಯುವುದು. ಈ ನಿಟ್ಟಿನಲ್ಲಿ ರಾಜ್ಯದ ನಿಯೋಗ ತನ್ನ ಕೆಲಸವನ್ನು ಯಶಸ್ವಿಯಾಗಿ ಮಾಡಿದೆ ಎನ್ನಲಾಗಿದೆ. ಅಲ್ಲದೆ ಮುಂದಿನ ನವೆಂಬರ್ ಆರಂಭದಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕ -2020 ರ ಕರ್ಟೈನ್ ರೈಸರ್ ಅನ್ನೂ ದಾವೋಸ್ ನಲ್ಲೇ ಅನಾವರಣ ಮಾಡುವ ಮೂಲಕ ವಿದೇಶಿ ಉದ್ಯಮಿಗಳ ಚಿತ್ತ ರಾಜ್ಯದ ಮೇಲೆ ಬೀಳಿಸುವ ಪ್ರಯತ್ನವನ್ನೂ ನಿಯೋಗ ಮಾಡಿತು.
ನವೆಂಬರ್‍ನಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕ 2020ರಲ್ಲಿ ಭಾಗವಹಿಸಲು ವಿದೇಶಿ ಉದ್ಯಮಿಗಳಿಂದ ಭರವಸೆಯೂ ಸಿಕ್ಕಿದೆ. ಆ ಮೂಲಕ ರಾಜ್ಯದಲ್ಲಿ ವಿದೇಶಿ ಹೂಡಿಕೆಗೆ ಹಲವು ವಿದೇಶಿ ಉದ್ಯಮಿಗಳು ಮುಂದೆ ಬಂದಿದ್ದಾರೆ. ಒಟ್ಟಾರೆ ಜಾಗತಿಕ ಉದ್ಯಮಿಗಳ ಜೊತೆ ಸಿಎಂ ಮತ್ತು ನಿಯೋಗದ ಸಂವಾದ ಸಕ್ಸಸ್ ಆಗಿದೆ ಎನ್ನಲಾಗಿದೆ.