78ನೇ ವಸಂತಕ್ಕೆ ಬಿಎಸ್‍ವೈ ಎಂಟ್ರಿ- ಜನ್ಮದಿನದಂದು ಸಿಎಂ ದಿನಚರಿ ಹೀಗಿದೆ

Public TV
2 Min Read
yeddyurppa bsy Smile

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ 78ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ನಾಳೆ ಇಡೀ ದಿನ ಬ್ಯುಸಿ ಶೆಡ್ಯೂಲ್ ಹಾಕಿಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ತಮ್ಮ ಜನ್ಮದಿವಾದ ಫೆ.27 ರಂದು ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಬ್ಯುಸಿ ಇರಲಿದ್ದಾರೆ.

ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭ ನಾಳೆ ಸಂಜೆ 6ಕ್ಕೆ ಆರಂಭವಾಗಲಿದೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಸಿಎಂ ಎಸ್.ಎಂ.ಕೃಷ್ಣ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರು, ಸಂಸದರು, ರಾಜ್ಯಸಭೆ ಸದಸ್ಯರು, ರಾಜ್ಯದ ಸಚಿವರು, ಶಾಸಕರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಕುರಿತ ಅಭಿನಂದನಾ ಗ್ರಂಥದ ಲೋಕಾರ್ಪಣೆ ಆಗಲಿದೆ.

images 3

ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಅವರು ಕಾವೇರಿ ನಿವಾಸದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಇದರ ಜೊತೆ ಗೃಹ ಪ್ರವೇಶ ಪೂಜೆಯನ್ನೂ ನಾಳೆಯೇ ಇಟ್ಟುಕೊಂಡಿದ್ದಾರೆ. ಕಾವೇರಿಯಲ್ಲಿ ಬೆಳಗ್ಗೆಯಿಂದಲೇ ನಡೆಯಲಿರುವ ಪೂಜಾ ಕೈಂಕರ್ಯಗಳಲ್ಲಿ ಯಡಿಯೂರಪ್ಪ ಅವರು ಕುಟುಂಬದ ಸದಸ್ಯರೂ ಭಾಗವಹಿಸಲಿದ್ದಾರೆ.

ನಂತರ ಶಿವಮೊಗ್ಗ- ಚೆನ್ನೈ ಮಾರ್ಗದ ರೈಲು ಸಂಚಾರಕ್ಕೆ ಮುಖ್ಯಮಂತ್ರಿಗಳು ಚಾಲನೆ ಕೊಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲು ಸಂಚಾರಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರದ ರಾಜ್ಯ ರೈಲ್ವೆ ಖಾತೆಯ ಸಚಿವ ಸುರೇಶ್ ಅಂಗಡಿ ಕೂಡ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಸಿಎಂ ಯಡಿಯೂರಪ್ಪ ಅರಮನೆ ಮೈದಾನಕ್ಕೆ ತೆರಳಿದ್ದಾರೆ.

BSY

ಟ್ವೀಟ್ ಮೂಲಕ ಸಿಎಂ ಮನವಿ:
ನಾಳೆ ತಮ್ಮ ಜನ್ಮದಿನ ಹಿನ್ನೆಲೆ ಸಿಎಂ ಟ್ವೀಟ್ ಮೂಲಕ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು, ಆಪ್ತರಿಗೆ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ನಾಳೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಫಲಪುಷ್ಪ, ಪೇಟ, ಶಾಲು, ಹಾರ, ತುರಾಯಿ, ಸಿಹಿತಿಂಡಿ ಹಾಗೂ ನೆನಪಿನ ಕಾಣಿಕೆಗಳನ್ನು ತರಬಾರದು ಎಂದು ತಿಳಿಸಿದ್ದಾರೆ.

ನಾಡಿನ ಸಮಸ್ತ ಜನತೆ, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಬಂಧುಗಳಲ್ಲಿ ವಿನಯ ಪೂರ್ವಕವಾಗಿ ಈ ಮನವಿ ಮಾಡಿಕೊಳ್ಳುತ್ತೇನೆ. ಎಲ್ಲರ ಹಾರೈಕೆ, ಹರಕೆ ಹಾಗೂ ಆಶೀರ್ವಾದಗಳಿಂದಲೇ ನಿಮ್ಮಲ್ಲೆರ ಸೇವೆ ಮಾಡುವ ಸ್ಥಾನದ ಸೌಭಾಗ್ಯವನ್ನು ಪಡೆದಿದ್ದೇನೆ. ನನ್ನ ಜೀವನದ ಎಲ್ಲ ಘಟ್ಟಗಳಲ್ಲೂ ನಿಮ್ಮೆಲ್ಲರ ಪ್ರೀತಿಯ ಮಹಾಪೂರದಲ್ಲಿ ಮಿಂದು ಪುನೀತನಾಗಿದ್ದೇನೆ, ವಿನೀತನಾಗಿದ್ದೇನೆ. ಹಾಗಾಗಿ ನಾಳೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಫಲಪುಷ್ಪ, ಪೇಟ, ಶಾಲು, ಹಾರ, ತುರಾಯಿ, ಸಿಹಿತಿಂಡಿ ಹಾಗೂ ನೆನಪಿನ ಕಾಣಿಕೆಗಳನ್ನು ತರಬಾರದೆಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *