ಅಂಜನಾದ್ರಿ ಪ್ರದೇಶದ ಅಭಿವೃದ್ಧಿಗೆ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ: ಭೂಸ್ವಾಧೀನಕ್ಕೆ ಸಿಎಂ ಅಸ್ತು

Public TV
3 Min Read
CM Basavaraj Bommai Koppala Anjanadri Mountain 3

ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಂಜನಾದ್ರಿ ಪರ್ವತದ ಅಭಿವೃದ್ಧಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಹಸಿರು ನಿಶಾನೆಯನ್ನು ತೋರಿಸಿದರು.

ಶ್ರೀರಾಮಚಂದ್ರನ ಜನ್ಮಭೂಮಿಯಾಗಿರುವ ಅಯೋಧ್ಯೆಯಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಅಂಜನಾದ್ರಿ ಪರ್ವತದ ಅಭಿವೃದ್ಧಿಯ ಕುರಿತು ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಒಟ್ಟು 120 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು.

CM Basavaraj Bommai Koppala Anjanadri Mountain 2

ಅನುದಾನ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಸಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿರಲಿಲ್ಲ. ಆದರೆ ಈ ಕುರಿತು ಖುದ್ದು ಬೊಮ್ಮಾಯಿ ಅವರೇ ಸಭೆಯನ್ನು ನಡೆಸಿ, ಅಭಿವೃದ್ಧಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಈ ಹಿನ್ನೆಲೆ ಬೆಂಗಳೂರಿನಲ್ಲಿ ಸಿಎಂ ತಮ್ಮ ಕಚೇರಿಯಲ್ಲಿ ಜೂನ್ 25 ರಂದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು 

CM Basavaraj Bommai Koppala Anjanadri Mountain 5

ಸಭೆಯಲ್ಲಿ ಬೊಮ್ಮಾಯಿ ಅವರು ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ, ಸಿದ್ಧಪಡಿಸಿದ ನೀಲನಕ್ಷೆಯನ್ನು ಪರಿಶೀಲನೆ ಮಾಡಿದರು. ಅಷ್ಟೇ ಅಲ್ಲದೆ ರಾಜ್ಯ ಸರ್ಕಾರ 120 ಕೋಟಿ ರೂ. ಅನುದಾನ ನೀಡುವ ಜೊತೆಗೆ ಕೇಂದ್ರದ ಸ್ವದೇಶಿ ದರ್ಶನ ಯೋಜನೆ ಅಡಿಯಲ್ಲಿ 100 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಒಪ್ಪಿಗೆಯನ್ನು ನೀಡಿದ್ದಾರೆ.

CM Basavaraj Bommai Koppala Anjanadri Mountain 4

ಏನೇನು ಇರಲಿದೆ?
ದೇಶ ಸೇರಿದಂತೆ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಅಂಜನಾದ್ರಿ ಪರ್ವತ ಅಭಿವೃದ್ಧಿಗೆ ಸಂಬಂಧಪಟ್ಟ ಸಭೆಯಲ್ಲಿ 600 ಕೊಠಡಿಗಳ ಪ್ರವಾಸಿ ಮಂದಿರಕ್ಕೆ 10 ಎಕರೆ ಭೂಮಿ ಬಳಕೆ, 5 ಎಕರೆಯಲ್ಲಿ ಅಡುಗೆ ಕೋಣೆ ನಿರ್ಮಾಣ, 3 ಎಕರೆಯಲ್ಲಿ ಸಮುದಾಯ ಭವನ, 8 ಎಕರೆಯಲ್ಲಿ ಪಾರ್ಕಿಂಗ್ ಸ್ಥಳ, 4 ಎಕರೆ 16 ಗುಂಟೆಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, 2 ಎಕರೆಯಲ್ಲಿ ಪ್ರದರ್ಶನ ಪಥ, 1 ಎಕರೆಯಲ್ಲಿ ಸ್ನಾನಘಟ್ಟ ನಿರ್ಮಾಣ, 3 ಎಕರೆಯಲ್ಲಿ ರೋಪ ವೇ ಸೇರಿದಂತೆ ಕಚೇರಿ ಕೊಠಡಿ, ಪೊಲೀಸ್ ಹೊರಠಾಣೆ, ಆಡಿಯೋ ಸೌಂಡ್ ಶೋ, ರಾಮಾಯಣ ಕುರಿತ ಪೇಂಟಿಂಗ್, ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಜಾಗ ಸೇರಿದಂತೆ ಇತರ ಒಟ್ಟು 24 ಕಾಮಗಾರಿಗಳ ದಾಖಲೆಗಳನ್ನು ಬೊಮ್ಮಾಯಿ ಅವರು ಪರಿಶೀಲನೆ ನಡೆಸಿ, ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ.

Anjanadri Hill Hampi Koppala 1

76 ಎಕರೆ ಭೂಸ್ವಾಧೀನಕ್ಕೆ ಒಪ್ಪಿಗೆ
ದೇವಸ್ಥಾನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಜಾಗದ ಅವಶ್ಯಕತೆ ಇದ್ದು, ಅದಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಬೊಮ್ಮಾಯಿ ಅವರು ಒಪ್ಪಿಗೆಯನ್ನು ನೀಡಿದ್ದಾರೆ. ಬೆಟ್ಟ ಸಮೀಪದ ಚಿಕ್ಕರಾಂಪೂರ, ಹನುಮನಹಳ್ಳಿ ಗ್ರಾಮ ಸಮೀಪದ 76 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ತಿಳಿಸಿದ್ದಾರೆ.

CM Basavaraj Bommai Koppala Anjanadri Mountain 1

ಮೊದಲ ಹಂತದಲ್ಲಿ 60 ಎಕರೆಯನ್ನು, ಎರಡನೇ ಹಂತದಲ್ಲಿ 16 ಎಕರೆಯನ್ನು ಸ್ವಾಧೀನ ಮಾಡಿಕೊಳ್ಳಲು ಸೂಚಿಸಲಾಗಿದೆ. ಭೂಮಿ ನೀಡಲು ರೈತರು ವಿರೋಧ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರೊಂದಿಗೆ ಚರ್ಚೆ ನಡೆಸಿ, ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ.

ಹೆಲಿಪ್ಯಾಡ್ ನಿರ್ಮಾಣದ ಚರ್ಚೆ
ಅಯೋಧ್ಯೆಯಷ್ಟೇ ಪ್ರಾಮುಖ್ಯತೆ ಇರುವ ಅಂಜನಾದ್ರಿ ಪರ್ವತಕ್ಕೆ ದೇಶ ಸೇರಿದಂತೆ ವಿದೇಶಗಳಿಂದ ಗಣ್ಯ ವ್ಯಕ್ತಿಗಳು ಆಗಮಿಸುತ್ತಾರೆ. ಅವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಅಂಜನಾದ್ರಿ ಪರ್ವತದ ಸಮೀಪದಲ್ಲಿ ಅಥವಾ ಬೆಟ್ಟದ ಮೇಲುಗಡೆ ಹೆಲಿಪ್ಯಾಡ್ ನಿರ್ಮಾಣ ಮಾಡುವ ಕುರಿತು ಕೂಡ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಚರ್ಚೆಯನ್ನು ನಡೆಸಿದರು. ಇದನ್ನೂ ಓದಿ: ಅಗ್ನಿಪಥ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದೆ: ಅಚ್ಚರಿ ಹೇಳಿಕೆ ಕೊಟ್ಟ ಸವದಿ 

Anjanadri betta Main

ಬೆಟ್ಟದ ಮೇಲೆ ನಿರ್ಮಿಸಿದರೆ ಅದರಿಂದ ಎದುರಾಗುವ ಅನಾನುಕೂಲಗಳು ಹಾಗೂ ಅನುಕೂಲಗಳ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಅದೇ ರೀತಿಯಾಗಿ ವಾಹನಗಳ ಮೂಲಕ ಆಗಮಿಸುವ ಭಕ್ತರಿಗೆ ಅನುಕೂಲವಾಗಲು ಗಂಗಾವತಿಯಿಂದ ಹುಲಿಗಿ ಸಮೀಪದ ಹೆದ್ದಾರಿಯವರೆಗೆ ಒಟ್ಟು 35 ಕಿ.ಮೀ ರಸ್ತೆಯನ್ನು ಚತುಷ್ಪಥ ರಸ್ತೆ ನಿರ್ಮಾಣ ಮಾಡುವ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ, ರಸ್ತೆ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *