ಬಿಎಸ್‍ವೈ ನಿಜವಾದ ಮಾನಸ ಪುತ್ರ ನಾನೇ: ಎಂ.ಪಿ.ಕುಮಾರಸ್ವಾಮಿ

Public TV
1 Min Read
BJP M.P. Kumaraswamy

– ಸಚಿವ ಸ್ಥಾನದ ಆಕಾಂಕ್ಷೆ ಬಿಚ್ಚಿಟ್ಟ ಶಾಸಕರು

ಚಿಕ್ಕಮಗಳೂರು: ನಿನ್ನೆ ನನ್ನ ಕೆಲ ಸ್ನೇಹಿತರು ತಾವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾನಸ ಪುತ್ರರು ಎಂದು ಹೇಳಿದ್ದಾರೆ. ಆದರೆ ಅವರೆಲ್ಲಾ ಬಸವಣ್ಣನ ಅನುಯಾಯಿಗಳು. ಸಿಎಂ ಯಡಿಯೂರಪ್ಪ ಅವರ ನಿಜವಾದ ಮಾನಸ ಪುತ್ರ ಅಂದ್ರೆ ಅದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಎಂದು ಸ್ವತಃ ಶಾಸಕರೇ ಹೇಳಿದ್ದಾರೆ.

ಉಪಚುನಾವಣೆ ಫಲಿತಾಂಶದ ಬಳಿಕ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ನಾನೆಂದೂ ಸಿಎಂ ಯಡಿಯೂರಪ್ಪನವರ ಮಾತನ್ನು ಮೀರಿಲ್ಲ. ಅವರು ಹಾಕಿದ ಗೆರೆಯನ್ನು ದಾಟಿಲ್ಲ. ಅವರ ಮನಸಿನಲ್ಲಿ ನಾನಿದ್ದೇನೆ, ನನ್ನನ್ನ ಸಚಿವನನ್ನಾಗಿ ಮಾಡಿ ಅಂತ ಕೇಳಿಕೊಳ್ಳುತ್ತೇನೆ. ನನ್ನನ್ನು ಮಂತ್ರಿ ಮಾಡುವ ವಿಶ್ವಾಸವಿದೆ ಎಂದು ಶಾಸಕ ಕುಮಾರಸ್ವಾಮಿ ಅವರು ಸಚಿವ ಸ್ಥಾನದ ಆಕಾಂಕ್ಷೆ ಹೊರ ಹಾಕಿದ್ದಾರೆ.

M.P. Kumaraswamy

ಪ್ರಮಾಣ ವಚನಕ್ಕೆ ಹೋಗಿರಲಿಲ್ಲ:
ಮೈತ್ರಿ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ರಚಿಸಿದಾಗ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೋಗಿರಲಿಲ್ಲ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಶಾಸಕರು, ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ನನಗಲ್ಲದಿದ್ದರೂ ನಮ್ಮ ಸಮುದಾಯದ ಬೇರೆ ಯಾರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು ಎಂದು ಅಸಮಾಧಾನ ಹೊರಹಾಕಿದರು.

ಸಚಿವ ಸ್ಥಾನ ಕೈತಪ್ಪಿದ್ದರಿಂದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಿಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಇಲ್ಲ ಮಳೆಯಿಂದ ಕ್ಷೇತ್ರದ ಜನ ಸಂಕಷ್ಟಕ್ಕೀಡಾಗಿದ್ದರು. ಅವರ ಕಷ್ಟ-ಸುಖ ಕೇಳಲು ಕ್ಷೇತ್ರದಲ್ಲಿದ್ದೆ. ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ನನಗೆ ಮಂತ್ರಿಗಿರಿ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *