ಹಾಸನ: ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿರುದ್ಧ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸ್ಮಾರಕ ನಿರ್ಮಾಣ ಮಾಡಲಿ ಅಂತಾ ಅನಿರುದ್ಧ್ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ. ಪದ ಬಳಕೆ ಮಾಡುವಾಗ ಪದಗಳ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಕಲಾವಿದರು ಮಾಡಿದ ಕೆಲಸಕ್ಕೆ ಸರ್ಕಾರ ಗೌರವ ಕೊಟ್ಟಿದ್ದೇವೆ ಎಂದು ಸಿಎಂ ಕಿಡಿಕಾರಿದರು.
Advertisement
Advertisement
ವಿಷ್ಣುವರ್ಧನ್ ಅವರು ನಿಧನರಾದಾಗ ನಾನು ಸಿಎಂ ಆಗಿರಲಿಲ್ಲ. ನಿಧನದ ಸುದ್ದಿ ತಿಳಿದಾಗ ನಾನು ಅವರ ಮನೆಗೆ ಹೋಗಿ ದರ್ಶನ ಪಡೆದಿದ್ದೇನೆ. ಆ ವೇಳೆ ಭಾರತಿ ವಿಷ್ಣುವರ್ಧನ್ ಮತ್ತು ನಟ ಶಿವರಾಂ ಅವರಲ್ಲಿ ಅಂತ್ಯಕ್ರಿಯೆ ಸಿದ್ಧತೆ ಬಗ್ಗೆ ಕೇಳಿದ್ದೇನೆ. ಅಂದು ಅವರು ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು. ವಿಷ್ಣುವರ್ಧನ್ ಓರ್ವ ದೊಡ್ಡ ಕಲಾವಿದರಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿದ್ರೆ ತಪ್ಪಾಗುತ್ತದೆ. ಅಂದು ಅಂಬರೀಶ್ ಅವರ ಜೊತೆ ಮಾತನಾಡಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಬೇಡ ಅಂತಾ ಹೇಳಿ ಸರ್ಕಾರಕ್ಕೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದೆ. ಆದ್ರೆ ಇಂದು ವಿಷ್ಣುವರ್ಧನ್ ಅಳಿಯ ಉಡಾಫೆ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿರುವುದು ನನಗೆ ನೋವು ತಂದಿದೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
Advertisement
ದೇಶದಲ್ಲಿ ಎಷ್ಟೋ ರಾಜಕಾರಣಿಗಳು ವಿಧಿವಶರಾದಾಗ ಈ ರೀತಿಯಲ್ಲಿ ಅಂತ್ಯಕ್ರಿಯೆ ನಡೆಸಿಲ್ಲ. ಕಲಾವಿದರಿಗೆ ನೀಡಿದ ಗೌರವದಷ್ಟು ಯಾವ ರಾಜಕಾರಣಿಗಳಿಗೂ ನೀಡಿಲ್ಲ. ಕೃತಜ್ಞತೆ ಇಲ್ಲದೆ ಮಾತನಾಡಿದರೆ ಏನು ಮಾಡೋದು. ಅಂಬಿ ಮತ್ತು ವಿಷ್ಣು ಜೊತೆ ನಾನೂ ಕೂಡ ಹತ್ತಿರದ ವ್ಯಕ್ತಿ. ನಾನೂ ಕೂಡ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದೇನೆ. ರಾಜ್‍ಕುಮಾರ್ ಅವರನ್ನು ಹತ್ತಿರದಿಂದ ಕಂಡಿದ್ದೇನೆ ಎಂದು ಹೇಳಿ ಅನಿರುದ್ಧ್ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv