ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥನ ಹಿಮಲಿಂಗದ ಗುಹೆ ಬಳಿ ಮೇಘಸ್ಫೋಟ ಸಂಭವಿಸಿದೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇನ್ನೂ 40 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಅಮರನಾಥನ ದರ್ಶನಕ್ಕೆ ತೆರಳಿರುವ ಸುಮಾರು 500 ಕನ್ನಡಿಗರು ಬೇಸ್ ಕ್ಯಾಂಪ್‌ನಲ್ಲಿ ಉಳಿದಿದ್ದಾರೆ ಎಂಬ ಮಾಹಿತಿ ದೊರೆತಿದೆ. ಬೆಂಗಳೂರು, ಮಂಡ್ಯ, ರಾಮನಗರ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಅಮರನಾಥನ ದರ್ಶನಕ್ಕೆ ತೆರಳಿ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಯಾತ್ರಾರ್ಥಿ ಮಹಾಪ್ರಭು ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯೊಂದಿಗೆ ವೀಡಿಯೋ ಸಂದರ್ಶನದಲ್ಲಿ ಮಾತನಾಡಿದ ಮಹಾಪ್ರಭು, ನಾವು ಬೇಸ್ ಕ್ಯಾಂಪ್‌ನಲ್ಲಿ ಸುಮಾರು 20 ಜನ ಸ್ನೇಹಿತರೊಂದಿಗೆ ಉಳಿದುಕೊಂಡಿದ್ದೇವೆ. ನಾವು ಇಂದು ಬೆಳಗ್ಗೆ 3 ಗಂಟೆಗೆ ಅಮರನಾಥನ ದರ್ಶನ ಮಾಡಬೇಕಿತ್ತು. ಆದರೆ ರಾತ್ರಿ ಮೇಘಸ್ಫೋಟದ ಸುದ್ದಿ ಬಂದಿದೆ. ಈ ಹಿನ್ನೆಲೆ ಪ್ರಯಾಣ ರದ್ದಾಗಿರುವುದರಿಂದ ನಾವೀಗ ಬೇಸ್‌ಕ್ಯಾಂಪ್‌ನಲ್ಲಿ ಇದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ, 40 ಮಂದಿ ನಾಪತ್ತೆ – ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ
Advertisement
ಇಲ್ಲಿ ಸುಮಾರು ಎರಡೂವರೆ ಸಾವಿರ ಜನರು ಇದ್ದಾರೆ. ಸುಮಾರು 500 ಜನ ಕನ್ನಡಿಗರೇ ಇದ್ದಾರೆ. ಚಿಕ್ಕಮಗಳೂರು, ಮಂಡ್ಯ, ರಾಮನಗರದಿಂದಲೂ ಭಕ್ತರು ಬಂದಿದ್ದಾರೆ. ಮೇಘಸ್ಫೋಟದ ಹಿನ್ನೆಲೆ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಅಮರನಾಥ ಪ್ರವಾಸ 1 ವಾರದ ವರೆಗೆ ಸ್ಥಗಿತವಾಗಿರುವ ಮಾಹಿತಿಯಿದೆ. ಭಾರೀ ಮಳೆಯೂ ಆಗುತ್ತಿದೆ ಎಂದರು.
Advertisement
ಒಂದು ಸಂತೋಷ ಪಡುವ ವಿಷಯವೆಂದರೆ ಇಲ್ಲಿ ಲಂಗರ್ಸ್ ಎಂಬ ವ್ಯವಸ್ಥೆ ಮಾಡಿದ್ದಾರೆ. ಅದರಲ್ಲಿ ಪ್ರವಾಸಿಗರಿಗೆ ಊಟದ ವ್ಯವಸ್ಥೆಯಿದೆ. ಆರ್ಮಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಬಿಎಸ್‌ಎಫ್ ತಂಡಗಳು ನಮಗೆ ಸಹಕಾರ ಕೊಡುತ್ತಿದ್ದಾರೆ. ಊಟ ತಿಂಡಿಯ ವ್ಯವಸ್ಥೆಯೂ ಇದೆ. ಆದರೆ ಎಲ್ಲರಲ್ಲೂ ಭಯದ ವಾತಾವರಣವಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಹೆಚ್ಚಿನ ಯಾತ್ರಿಕರು ಇಲ್ಲಿದ್ದಾರೆ ಎಂದು ತಿಳಿಸಿದರು.
ಅಮರನಾಥ ಗುಹೆಯ ಬಳಿ ಕರ್ನಾಟಕದ ಒಂದು ತಂಡದಿಂದ 12 ಜನ ಇನ್ನೂ ವಾಪಾಸ್ ಬಂದಿಲ್ಲ. ಯಾತ್ರೆ ವೇಳೆ ಮೊಬೈಲ್ ಫೋನ್‌ಗೆ ಅನುಮತಿ ಇಲ್ಲದ ಕಾರಣ ಅವರಿಗೆ ಸಂಪರ್ಕದ ಅವಕಾಶ ಸಿಕ್ಕಿಲ್ಲ. ಮಾಹಿತಿ ಪ್ರಕಾರ ಇಲ್ಲಿಯವರೆಗೆ ಯಾರೊಬ್ಬ ಕನ್ನಡಿಗರೂ ಅಪಾಯಕ್ಕೆ ಸಿಲುಕಿಲ್ಲ ಎಂದರು. ಇದನ್ನೂ ಓದಿ: ವಿಜಯಪುರದಲ್ಲೂ ಕಂಪಿಸಿದ ಭೂಮಿ – ಓಡೋಡಿ ಮನೆಯಿಂದ ಹೊರ ಬಂದ ಜನತೆ
ನಮಗೆ ಇಲ್ಲಿಂದ ಶ್ರೀನಗರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹೋಗುವ ದಾರಿ ಜ್ಯಾಮ್ ಆಗಿರುವ ಕಾರಣ ನಮಗೆ ತೆರಳಲು ಅನುಮತಿ ಸಿಗುತ್ತಿಲ್ಲ. ನಾವೀಗ ಊರಿಗೆ ವಾಪಾಸಾಗಲು ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.