ನವದೆಹಲಿ: ಮಹಿಳಾ ಕುಸ್ತಿಪಟುಗಳ (Wrestlers) ಮೇಲೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ರಾತ್ರಿ ಕುಸ್ತಿಪಟುಗಳು ಹಾಗೂ ಪೊಲೀಸರ (Police) ನಡುವೆ ಘರ್ಷಣೆ ಏರ್ಪಟ್ಟಿದೆ.
ಪ್ರತಿಭಟನಾ ಸ್ಥಳಕ್ಕೆ ತಮ್ಮ ಹಾಸಿಗೆಗಳನ್ನು ತರಲು ಯತ್ನಿಸಿದಾಗ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಅನೇಕ ಕುಸ್ತಿಪಟುಗಳ ತಲೆಗೆ ಏಟು ಬಿದ್ದಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಓರ್ವ ಕುಸ್ತಿಪಟು ಘರ್ಷಣೆಯಲ್ಲಿ ಗಾಯಗೊಂಡು ಪ್ರಜ್ಞೆತಪ್ಪಿ ಬಿದ್ದಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ಅವರು ಅನುಮತಿಯಿಲ್ಲದೆ ಹಾಸಿಗೆಗಳನ್ನು ಹಿಡಿದುಕೊಂಡು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿದಾಗ ಸಣ್ಣ ವಾಗ್ವಾದ ನಡೆದಿದೆ. ನಂತರ ಭಾರ್ತಿ ಹಾಗೂ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದು, ಹಲ್ಲೆಯ ಆರೋಪವನ್ನು ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಬಾರಾಮುಲ್ಲಾದಲ್ಲಿ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ಹತ್ಯೆ – ಜಮ್ಮುವಿನಲ್ಲಿ ಹೈ ಅಲರ್ಟ್
ಘರ್ಷಣೆಯ ಬಳಿಕ ಪ್ರತಿಭಟನಾ ಸ್ಥಳದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಹಾಗೂ ಬ್ಯಾರಿಕೇಡ್‌ನಿಂದ ನಿರ್ಬಂಧಿಸಲಾಗಿದೆ. ಪ್ರತಿಭಟನಾ ನಿರತ ಕುಸ್ತಿಪಟುಗಳ ಬಳಿಗೆ ಮಾಧ್ಯಮ ಸಿಬ್ಬಂದಿ ತೆರಳದಂತೆಯೂ ತಡೆಯಲಾಗಿದೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಭಾರತದ ಉನ್ನತ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. 6 ಬಾರಿ ಸಂಸದರಾಗಿರುವ ಭೂಷಣ್ ಸಿಂಗ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಸಿಂಗ್ ವಿರುದ್ಧ ಕುಸ್ತಿಪಟುಗಳು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಯತ್ನಾಳ್, ಪ್ರಿಯಾಂಕ್ ಖರ್ಗೆಗೆ ಶೋಕಾಸ್ ನೋಟಿಸ್ ಜಾರಿ