ಕ್ಯಾರಕಾಸ್: ವೆನೆಜುವೆಲಾ (Venezuela) ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು (Nicolás Maduro) ಬಂಧಿಸಲು ಅಮೆರಿಕ (America) ಕ್ಯಾರಕಾಸ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿ ಸೇರಿದಂತೆ 40 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ದಾಳಿಯಲ್ಲಿ ನಾಗರಿಕರು ಮತ್ತು ಸೈನಿಕರು ಸೇರಿದಂತೆ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ಕ್ಯಾರಕಾಸ್‌ನ ಕೆಲವು ಭಾಗಗಳು ಕತ್ತಲೆಯಲ್ಲಿ ಮುಳುಗಿದ್ದವು. ಈ ದಾಳಿಯ ಬಳಿಕ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿಯಲಾಯಿತು. ಇದನ್ನೂ ಓದಿ: ವೆನೆಜುವೆಲಾದ ಮೇಲೆ ಏರ್‌ಸ್ಟೈಕ್, ಅಧ್ಯಕ್ಷ ಸೆರೆ: ಟ್ರಂಪ್ ಘೋಷಣೆ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೇನಾ ಪಡೆಗಳು ಮಡುರೊ ಅವರನ್ನು ವಶಪಡಿಸಿಕೊಂಡು ಅಮೆರಿಕಕ್ಕೆ ಕರೆತಂದಿರುವುದಾಗಿ ಘೋಷಿಸಿದ್ದಾರೆ. ಮಡುರೊ ಈಗ ಯುಎಸ್ ವಶದಲ್ಲಿರುವುದರಿಂದ, ತಾತ್ಕಾಲಿಕವಾಗಿ ವೆನೆಜುವೆಲಾದ ಮೇಲೆ ನಿಯಂತ್ರಣವನ್ನು ವಹಿಸಿಕೊಳ್ಳುತ್ತದೆ. ಅಲ್ಲಿ ಸುರಕ್ಷಿತ, ಸರಿಯಾದ ಆಡಳಿತ ಬರುವ ತನಕ ನಾವು ದೇಶವನ್ನು ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಹೊತ್ತ ವಿಮಾನವು ಶನಿವಾರ ಸಂಜೆ ನ್ಯೂಯಾರ್ಕ್‌ನ ಸ್ಟೀವರ್ಟ್ ಏರ್ ನ್ಯಾಷನಲ್ ಗಾರ್ಡ್ ಬೇಸ್‌ಗೆ ಬಂದಿಳಿದಿದೆ. ಮುಂದಿನ ವಾರ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಮಡುರೊ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಆರೋಪಗಳನ್ನು ಎದುರಿಸುವ ನಿರೀಕ್ಷೆಯಿದೆ.
ಟ್ರಂಪ್‌ಗೆ ವೆನೆಜುವೆಲಾದ ಮೇಲೆ ಸಿಟ್ಯಾಕೆ?
ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎಂದು ಟ್ರಂಪ್ ಮೊದಲಿಂದಲೂ ಆರೋಪಿಸುತ್ತಾ ಬಂದಿದ್ದಾರೆ.
ಆರ್ಥಿಕ ನೀತಿಯಿಂದ ದಿವಾಳಿಯಾಗಿರುವ ವೆನೆಜುವೆಲಾವನ್ನು ಮಡುರೊ ಆಡಳಿತ ನಡೆಸುತ್ತಿದ್ದಾರೆ. ಮಡುರೊ ಸರ್ವಾಧಿಕಾರಿಯಾಗಿ ವರ್ತನೆ ತೋರುತ್ತಿದ್ದಾರೆ. ಅಷ್ಟೇ ವೆನೆಜುವೆಲಾ ರಷ್ಯಾ, ಚೀನಾ, ಇರಾನ್ ಜೊತೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇದು ಅಮೆರಿಕ ಕೆಂಗಣ್ಣಿಗೆ ಕಾರಣವಾಗಿದೆ.
ಮಡುರೊ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ನಾವು ದಾಳಿ ಮಾಡುತ್ತೇವೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಟ್ರಂಪ್ ವೆನೆಜುವೆಲಾ ವಿರುದ್ಧ ಏರ್‌ಸ್ಟ್ರೈಕ್ ಮಾಡಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಯುದ್ಧ ನೌಕೆಯಲ್ಲಿ ವೆನೆಜುವೆಲಾ ಅಧ್ಯಕ್ಷ – ಮೊದಲ ಚಿತ್ರ ಬಿಡುಗಡೆ ಮಾಡಿದ ಟ್ರಂಪ್


