ಮಂಗಳೂರು ಧಗಧಗ, ಪೊಲೀಸರ ಮೇಲೆ ಕಲ್ಲು – ಲಾಠಿ ಚಾರ್ಜ್, ಗಾಳಿಯಲ್ಲಿ ಗುಂಡು

Public TV
2 Min Read
MNG Protest 4

ಮಂಗಳೂರು: ಪೌರತ್ವ ಕಾಯ್ದೆ ವಿರೋಧಿ ನಗರದಲ್ಲಿ ಪ್ರತಿಭಟನೆ ಜೋರಾಗಿದ್ದು, ಕೆಲ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಅಷ್ಟೇ ಅಲ್ಲದೆ ನಗರದ ಪ್ರಮುಖ ಬೀದಿಗಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಪ್ರತಿಭಟನೆ ಜೋರಾಗುತ್ತಿದ್ದಂತೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ನಿಷೇಧಾಜ್ಞೆ ಹೊರತಾಗಿಯೂ ಕೆಲ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೆ ಯತ್ನಿಸಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಹೀಗಾಗಿ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣ, ಸ್ಟೇಟ್ ಬ್ಯಾಂಕ್ ವೃತ್ತ, ಹಂಪನಕಟ್ಟೆ ವೃತ್ತ ಸಂಪೂರ್ಣ ಸ್ಥಗಿತವಾಗಿದೆ. ಕೆಲ ಕಿಡಿಗೇಡಿಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‍ಗಳಿಗೆ ಬೆಂಕಿ ಹಚ್ಚಿದ್ದಾರೆ.

MNG Protest A

ಪ್ರತಿಭಟನೆ ನಿಷೇಧಿಸಿ ಹಾಕಿದ್ದ 144 ಸೆಕ್ಷನ್ ಉಲ್ಲಂಘಿಸಿ, ಕೆಲ ಯುವಕರು ಮೆರವಣಿಗೆ ನಡೆಸಲು ಯತ್ನಿಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗುವಂತಾಗಿದೆ. ಮಧ್ಯಾಹ್ನ ಆಗುತ್ತಿದ್ದಂತೆ ಯುವಕರು ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ಪೊಲೀಸರು ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ಸೇರಿದ್ದ ಸಾರ್ವಜನಿಕರನ್ನು ಹೊರಗೆ ಕಳುಹಿಸಿದರು.ಈ ವೇಳೆ ಮನವಿ ಲೆಕ್ಕಿಸದೆ ಮುನ್ನುಗ್ಗಿದ ಯುವಕರ ಮೇಲೆ ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಾರೆ. ಆದರೆ ಲಾಠಿಗೆ ಪ್ರತಿಯಾಗಿ ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಪ್ರತಿಭಟನಾಕಾರರು ಬೀಸಿದ ಕಲ್ಲುಗಳು ತಾಗಿ ಕೆಲ ಪೊಲೀಸರು ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಯುವಕರು ಪ್ರತಿಭಟನೆ ಮುಂದುವರಿಸಿದ್ದು, ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

MNG Protest B

ಪೌರತ್ವ ಮಸೂದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸುತ್ತವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿತ್ತು. ಹೀಗಾಗಿ ಬೆಳಗ್ಗಿನಿಂದಲೂ ಪೊಲೀಸರು ಜನ ಗುಂಪು ಕೂಡದಂತೆ ಎಚ್ಚರಿಸುತ್ತಾ ಜನರನ್ನು ಚದುರಿಸುತ್ತಿದ್ದರು. ಹೆಚ್ಚುವರಿ ಪೊಲೀಸ್ ಪಡೆಯನ್ನೂ ಮಂಗಳೂರಿನಲ್ಲಿ ನಿಯೋಜನೆ ಮಾಡಲಾಗಿತ್ತು.

ಸ್ವತಃ ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್ ಹರ್ಷ ನಗರದ ಆಯಕಟ್ಟಿನ ಪ್ರದೇಶಗಳಿಗೆ ತೆರಳಿ, ಬಂದೋಬಸ್ತ್ ನೋಡಿಕೊಂಡಿದ್ದರು. ಮಧ್ಯಾಹ್ನ ಕಮಿಷನರೇಟ್ ಕಚೇರಿಗೆ ಮುತ್ತಿಗೆ ಹಾಕುವ ಸಂದೇಶ ಹರಿದಾಡಿದ ಹಿನ್ನೆಲೆಯಲ್ಲಿ ಗನ್ ಪಾಯಿಂಟ್ ನಿರ್ಮಾಣವೂ ನಡೆದಿತ್ತು. ಇಷ್ಟಾದರೂ, ಉದ್ರಿಕ್ತ ಕೆಲವು ಯುವಕರು ಪ್ರತಿಭಟನೆ ನಡೆಸಿಯೇ ಸಿದ್ಧ ಎನ್ನುವಂತೆ ನುಗ್ಗಿ ಬಂದಿದ್ದು ವಿಕೋಪಕ್ಕೆ ತಿರುಗುವಂತಾಗಿದೆ. ಸದ್ಯಕ್ಕೆ ಮಂಗಳೂರಿನ ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್ ವೃತ್ತ, ಹಳೆ ಬಂದರು ಪ್ರದೇಶ ಸಂಪೂರ್ಣ ಬಂದ್ ಆಗಿವೆ. ಕಟ್ಟಡಗಳಲ್ಲಿ ಅಡಗಿ ನಿಂತು ಕಲ್ಲು ತೂರಾಟ ನಡೆಸಿದ ಗುಂಪನ್ನು ಅಶ್ರುವಾಯು ಮೂಲಕ ಚದುರಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ, ಉದ್ರಿಕ್ತ ಯುವಕರನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.

MNG Protest C

Share This Article
Leave a Comment

Leave a Reply

Your email address will not be published. Required fields are marked *