ಮಂಗಳೂರು: ಬಹುಷಃ ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶದಲ್ಲಿ ಈ ಪರಿ ವಿರೋಧ ವ್ಯಕ್ತವಾಗುತ್ತದೆ ಎಂದು ಕೇಂದ್ರ ಸರ್ಕಾರ ಭಾವಿಸಲಿಕ್ಕಿಲ್ಲ ಎನಿಸುತ್ತಿದೆ. ಕಳೆದ 8 ದಿನಗಳಿಂದ ಪೌರತ್ವ ಜ್ವಾಲೆ ಇಡೀ ದೇಶವನ್ನು ಆವರಿಸಿದೆ. ಇದೀಗ ಕರ್ನಾಟಕವೂ ಧಗಧಗಿಸಿದೆ.
ರಾಜ್ಯಾದ್ಯಾಂತ ಇಂದು ನಿಷೇಧಾಜ್ಞೆ ಜಾರಿಗೊಳಿಸಿದ್ದರೂ, ಮಂಗಳೂರಿನಲ್ಲಿ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು ಗೋಲಿಬಾರ್ ನಡೆದಿದೆ. ಬಂದರು ಸಮೀಪ ನಡೆದ ಹಿಂಸಾಚಾರ ಹತ್ತಿಕ್ಕುವ ಭರದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದು, ಗುಂಡು ತಗುಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರ ಕಣ್ಣಿಗೆ ಗುಂಡೇಟು ಬಿದ್ದಿದ್ದರೆ, ಇನ್ನೊಬ್ಬರ ಬೆನ್ನಿನ ಭಾಗಕ್ಕೆ ಗುಂಡು ಬಿದ್ದಿದ್ದು ನಗರದಲ್ಲಿ ಶುಕ್ರವಾರ ಮಧ್ಯರಾತ್ರಿಯವರೆಗೆ ಕಫ್ರ್ಯೂ ಜಾರಿ ಮಾಡಿದ್ದಾರೆ.
ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿದ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರು, ಪೊಲೀಸ್ ಗೋಲಿಬಾರ್ ನಲ್ಲಿ ಮಂಗಳೂರು ನಿವಾಸಿಗಳಾದ ನೌಶೀನ್ ಕುದ್ರೋಳಿ ಹಾಗೂ ಅಬ್ದುಲ್ ಜಲೀಲ್ ಮೃತಪಟ್ಟಿದ್ದಾರೆ. ಮೃತ ಹಾಗೂ ಗಂಭೀರವಾಗಿ ಗಾಯಗೊಂಡ ಯುವಕರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗುಂಡು ಹಾರಿಸಿದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಪಿಎಸ್ ಹರ್ಷ ಕೂಡ ಸ್ಪಷ್ಟನೆ ನೀಡಿದ್ದು, ಉದ್ರಿಕ್ತರು ಮಾರಕಾಸ್ತ್ರ ಹಿಡಿದು ಪೊಲೀಸರ ಮೇಲೆ ಯತ್ನಿಸಿದರು. ಇದರಿಂದಾಗಿ ಕೆಲ ಪೊಲೀಸರು ಹಾಗೂ ಸಾರ್ವಜನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರ ಉಗ್ರಸ್ವರೂಪದ ಭೀತಿ ಕಾಳಗದಿಂದ ಅನಿವಾರ್ಯವಾಗಿ ಗುಂಡು ಹಾರಿಸಿಬೇಕಾಯಿತು ಎಂದು ತಿಳಿಸಿದ್ದಾರೆ.
ನಗರದಲ್ಲಿ ಶಾಂತಿ ಕಾಪಾಡುವಂತೆ ಬುಧವಾರ ರಾತ್ರಿ ಸಭೆ ನಡೆಸಿ ಎಲ್ಲಾ ಸಮುದಾಯದ ಮುಖಂಡರಿಗೆ ಮನವಿ ಮಾಡಿಕೊಂಡಿದ್ದೆವು. 144 ಸೆಕ್ಷನ್ ಜಾರಿ ಸಂಬಂಧ ಎಲ್ಲಾ ನಗರದ ವಿವಿಧ ಬೀದಿಗಳಲ್ಲಿ ಭಿತ್ತಿಪತ್ರ ಅಂಟಿಸಿದ್ದೆವು. ಆದರೂ ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಬಳಿ ಯುವಕರು ಪ್ರತಿಭಟನೆ ನಡೆಸಿ ಶಾಂತಿ ಕದಡಿದರು. ಹೀಗಾಗಿ ಅಶ್ರುವಾಯು ಬಳಸಿ ಗುಂಪನ್ನು ಚದುರಿಸಿದ್ದೇವು. ಆದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಭಾರೀ ಅನಾಹುತಗಳನ್ನು ಸೃಷ್ಟಿಸಿತು ಎಂದು ತಿಳಿಸಿದರು.
ಘರ್ಷಣೆ ಹೇಗಾಯ್ತು?
ಡಿಸಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಪ್ರತಿಭಟನಾಕಾರರು ಬೈಕ್‍ಗೆ ಬೆಂಕಿ ಹಚ್ಚಿದರು. ಕೂಡಲೇ ಪೊಲೀಸರು ಲಾಠಿ ಚಾರ್ಜ್ ನಡೆಸಿ ಸಿಕ್ಕಸಿಕ್ಕವರನ್ನು ಹೊಡೆದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಯಶಸ್ವಿಯಾದರೂ, ಸಂಜೆ ಹೊತ್ತಿಗೆ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು.
ಪೊಲೀಸರ ಮೇಲೆ ಪ್ರತಿಭಟನಾಕಾರರು ನಿರಂತರವಾಗಿ ಕಲ್ಲು ತೂರಿ, ವಾಹನಗಳಿಗೆ ಬೆಂಕಿ ಹಚ್ಚುತ್ತಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಗುಂಡು ಹಾರಿಸಿದರು. ಕಲ್ಲು ತೂರಿದರು. ಕಟ್ಟಡವೊಂದರಲ್ಲಿ ಅಡಗಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿದರು. ಜನರಂತೂ ದಿಕ್ಕೆಟ್ಟು ಓಡಿದರು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೂ ಬಂದರು ಠಾಣೆ ಸೇರಿದಂತೆ, 5 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಫ್ರ್ಯೂ ಜಾರಿಗೊಳಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಬಿಗಿಯಾದ ಬಂದೋಬಸ್ತ್ ಮಾಡಲಾಗಿದೆ. ಶುಕ್ರವಾರ ಮಂಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳೂರು ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಉನ್ನತಾಧಿಕಾರಿಗಳನ್ನು ಮಂಗಳೂರಿಗೆ ಕಳಿಸುವುದಾಗಿ ತಿಳಿಸಿದ್ದಾರೆ.