ಬೆಂಗಳೂರು: ಹೆಬ್ಬಾಳದ ಕೆಂಪಾಪುರ ಬಡಾವಣೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ವಾಲಿದ್ದ ನಾಲ್ಕು ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಮುಂದುವರಿದಿದೆ.
ಇಂದು ಬೆಳಗ್ಗೆ 8 ಗಂಟೆಯಿಂದಲೇ ಕಟ್ಟಡ ತೆರವು ಕಾರ್ಯಾಚರಣೆ ಆರಂಭವಾಗಿದೆ. ವಾಲಿದ್ದ ಕಟ್ಟಡದ ಅಕ್ಕಪಕ್ಕದ ಸ್ಥಳೀಯರನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಗುತ್ತಿಗೆ ಆಧಾರದ ಮೇಲೆ ಬಿಬಿಎಂಪಿ, ಸಿಐಟಿಐ ಕಂಪನಿಗೆ ಕಟ್ಟಡ ತೆರವು ಕಾರ್ಯಾಚರಣೆ ಮಾಡುವ ಹೊಣೆಯನ್ನ ವಹಿಸಿದೆ. ಒಟ್ಟು 20 ಸಿಬ್ಬಂದಿ ಹಾಗೂ ಒಂದು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ವಾಲಿದ ಕಟ್ಟಡದ ಪಕ್ಕದಲ್ಲಿಯೇ ಮತ್ತೊಂದು ನಾಲ್ಕು ಅಂತಸ್ತಿನ ಕಟ್ಟಡ ಇರುವುದರಿಂದ ತುಂಬಾ ಜಾಗೃತೆಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಸ್ವಲ್ಪ ಎಡವಟ್ಟಾದ್ರೂ ಪಕ್ಕದ ಮನೆಗಳ ಮೇಲೆ ಕಟ್ಟಡ ಉರುಳಿ ಬೀಳುವ ಸಾಧ್ಯತೆಯಿದೆ. ಹೀಗಾಗಿ ಈ ರಸ್ತೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿಷೇಧವನ್ನ ಹೇರಲಾಗಿದೆ. ಸುಮಾರು 30ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ.