Bengaluru CityCinemaDistrictsKarnatakaLatest

2018ರಲ್ಲಿ ಸಿನಿಮಾರಂಗ ಕಳೆದುಕೊಂಡ ಕಲಾವಿದರು

2018 ಮುಗಿದು 2019ಕ್ಕೆ ಎಲ್ಲರು ಪಾದಾರ್ಪಣೆ ಮಾಡುತ್ತಿದ್ದೇವೆ. ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಚಿತ್ರರಂಗ ಹಲವು ಏರುಪೇರುಗಳನ್ನು ಕಂಡಿದೆ. ಸಿನಿಮಾದ ದಂತಕತೆ ಎಂದು ಕರೆಸಿಕೊಳ್ಳುತ್ತಿದ್ದ ಅಂಬರೀಶ್, ಶ್ರೀದೇವಿ, ಕಾಶಿನಾಥ್ ಸೇರಿದಂತೆ ಹಲವು ಗಣ್ಯರನ್ನು 2018ರಲ್ಲಿ ನಾವೆಲ್ಲ ಕಳೆದುಕೊಂಡಿದ್ದೇವೆ.

ಕಾಶಿನಾಥ್:
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಜನವರಿ 18ರಂದು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಶ್ರೀಶಂಕರ್ ಆಸ್ಪತ್ರೆಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದರು. ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆದಿತ್ತು. ಕಾಶಿನಾಥ್ ಅವರು 43 ಸಿನಿಮಾಗಳಲ್ಲಿ ನಟಿಸಿದ್ದರು. 11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ. ಅಷ್ಟೇ ಅಲ್ಲದೇ ಉಪೇಂದ್ರರಂತಹ ಕಲಾವಿದರನ್ನ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದಾಗಿದೆ.

ಕೃಷ್ಣಕುಮಾರಿ:
60-80 ರ ದಶಕದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಕೃಷ್ಣಕುಮಾರಿ ಜನವರಿ 24ರಂದು ವಿಧಿವಶರಾದರು. ಕೃಷ್ಣಕುಮಾರಿ ನೈಹಾತಿಯ ತೆಲಗು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ತೆಲುಗು, ತಮಿಳು, ಕನ್ನಡ ಮಲೆಯಾಳಂ ಹಾಗು ಹಿಂದಿ ಸೇರಿದಂತೆ ಸುಮಾರು 230ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೃಷ್ಣಕುಮಾರಿ ನಟಿಸಿದ್ದರು. 1951ರಲ್ಲಿ ನವ್ವಿತೆ ನವರತ್ನುಲು ಎಂಬ ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಕೃಷ್ಣ ಕುಮಾರಿ, ಡಾ.ರಾಜ್ ಕುಮಾರ್, ಎನ್‍ಟಿಆರ್, ಎಎನ್‍ಆರ್, ಶಿವಾಜಿ ಗಣೇಶನ್ ರಂತಹ ಸ್ಟಾರ್ ನಟರ ಜೊತೆ ನಟಿಸಿದ್ದರು.

ಶ್ರೀದೇವಿ:
ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಫೆಬ್ರವರಿ 25ರಂದು ಹೃದಯಾಘಾತಗೊಂಡು ನಿಧನರಾಗಿದ್ದರು. 13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿತ್ತು. 2013ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಶ್ರೀದೇವಿ ಅವರನ್ನು ಗೌರವಿಸಿತ್ತು.

ಪಿ.ಎನ್.ಸತ್ಯ:
ನಿರ್ದೇಶಕ, ನಟ ಪಿ.ಎನ್ ಸತ್ಯ ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೆ ಮೇ 5ರಂದು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಮೆಜೆಸ್ಟಿಕ್, ಡಾನ್, ದಾಸ, ಶಾಸ್ತ್ರೀ, ಗೂಳಿ ಸೇರಿದಂತೆ 16 ಚಿತ್ರಗಳನ್ನ ನಿರ್ದೇಶಿಸಿದ್ದ ಸತ್ಯ ಅವರ ಕೊನೆಯ ಚಿತ್ರ ಮರಿ ಟೈಗರ್ ಆಗಿತ್ತು. ನಿರ್ದೇಶನ ಮಾತ್ರವಲ್ಲದೇ 21 ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಇವರ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದರು.

ನಿರೂಪಕ ಚಂದನ್:
ಖಾಸಗಿ ವಾಹಿನಿ ನಿರೂಪಕ ಚಂದನ್ ಅಪಘಾತದಲ್ಲಿ ಮೃತಪಟ್ಟಿದ್ದರು. ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪತ್ನಿ ಮೀನಾ ತಮ್ಮ ಮಗ ತುಷಾರ್ ನನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕೊನೆಗೂ ಅವರು ಮೃತಪಟ್ಟಿದ್ದಾರೆ. ತುಷಾರ್ ಕಣ್ಣನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.

ಹಾಸ್ಯನಟ ಮಲ್ಲೇಶ್:
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಚಲನಚಿತ್ರ ಹಾಸ್ಯ ನಟ ವಠಾರ ಮಲ್ಲೇಶ್(42) ಜೂನ್ 6ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ್ರು. ಮಲ್ಲೇಶ್ ಬನ್ನೇರುಘಟ್ಟದ ಜಂಗಲಪಾಳ್ಯದಲ್ಲಿ ವಾಸವಾಗಿದ್ದರು. ಮಲ್ಲೇಶ್ ಮೂಲತಃ ಕೃಷಿಕ ಕುಟುಂಬದವರಾಗಿದ್ದು, ಟೆಲಿಫೋನ್ ಬೂತ್ ಕೆಲಸ ಮಾಡುತ್ತಿದ್ದರು. ಮಲ್ಲೇಶ್ ಅವರು ಸುಮಾರು 250ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯಿಸಿದ್ದಾರೆ. ಇನ್ನು ಕಿರುತೆರೆಯಲ್ಲಿ ಸುಮಾರು 60ಕ್ಕೂ ಅಧಿಕ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಸದಾಶಿವ ಬ್ರಹ್ಮಾವರ್:
ತೆರೆಯ ಮೇಲೆ ಜನರನ್ನು ರಂಜಿಸಿ ಅದೆಷ್ಟೋ ಪಾತ್ರಕ್ಕೆ ಜೀವ ತುಂಬಿದ ಮೇರು ಕಲಾವಿದ ಸದಾಶಿವ ಬ್ರಹ್ಮಾವರ್(90) ವಯೋಸಹಜ ಖಾಯಿಲೆಯಿಂದ ಸೆಪ್ಟೆಂಬರ್ 20ರಂದು ವಿಧಿವಶರಾಗಿದ್ದಾರೆ. ಸದಾಶಿವ ಬ್ರಹ್ಮಾವರ್ ಅವರು ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್, ದರ್ಶನ್, ಸುದೀಪ್, ರವಿಚಂದ್ರನ್, ಜಗ್ಗೇಶ್ ಸೇರಿದಂತೆ ಅನೇಕ ನಟರ ಜೊತೆ ಅಭಿನಯಿಸಿದ್ದರು. ಇವರು ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬುತ್ತಿದ್ದರು.

ಅನ್ನಪೂರ್ಣ ದೇವಿ:
ಖ್ಯಾತ ಹಿಂದುಸ್ತಾನಿ ಗಾಯಕಿ ಅನ್ನಪೂರ್ಣದೇವಿ (91) ಅಕ್ಟೋಬರ್ 13ರಂದು ವಿಧಿವಶರಾಗಿದ್ದಾರೆ. ಪದ್ಮಭೂಷಣ ಪುರಸ್ಕೃತ, ಮಾಯಿಹಾರ್ ಗರಾನಾ ಸಂಸ್ಥಾಪಕರಾದ ಅನ್ನಪೂರ್ಣ ದೇವಿಯವರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅಲ್ಲಾವುದಿನ್ ಖಾನ್ ಮತ್ತು ಮದೀನಾ ಬೇಗಮ್ ದಂಪತಿಯ ನಾಲ್ಕು ಮಕ್ಕಳ ಪೈಕಿ ಕಿರಿಯ ಮಗಳಾದ ಅನ್ನಪೂರ್ಣ ದೇವಿ ಅವರು ಮಧ್ಯಪ್ರದೇಶದ ಮಾಯಿಹಾರ್ನಲ್ಲಿ 1927ರ ಏಪ್ರಿಲ್ 23 ರಂದು ಜನಿಸಿದ್ದರು. ಪೋಷಕರು ಮಗಳಿಗೆ ರೋಷನಾರಾ ಎಂದು ಹೆಸರನ್ನು ಇಟ್ಟಿದ್ದರೂ ಮಧ್ಯಪ್ರದೇಶದ ರಾಜ ಬ್ರಿಜನಾಥ್ ಸಿಂಗ್ ಅನ್ನಪೂರ್ಣ ದೇವಿ ಎಂದು ಹೆಸರನ್ನು ನೀಡಿದ್ದರು. ಮುಂದೆ ಅನ್ನಪೂರ್ಣದೇವಿ ಎನ್ನುವ ಹೆಸರೇ ಪ್ರಸಿದ್ಧವಾಗಿತ್ತು.

ಅಂಬರೀಶ್:
ನವೆಂಬರ್ 24 ರೆಬೆಲ್ ಸ್ಟಾರ್ ಅಂಬಬರೀಶ್ ನಿಧನದ ಸುದ್ದಿ ಚಂದನವನಕ್ಕೆ ಬರ ಸಿಡಲಿನಂತೆ ಅಪ್ಪಳಿಸಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 24 ಶನಿವಾರ ರಾತ್ರಿ ವಿಧಿವಶರಾದರು. ಭಾನುವಾರ ಕಂಠೀರವ ಸ್ಟೇಡಿಯಂನಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಮಂಡ್ಯದ ಜನತೆಗೆ ಅಂತಿಮ ದರ್ಶನದ ವ್ಯವಸ್ಥೆ ಕಲ್ಪಿಸಬೇಕೆಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಅಭಿಮಾನಿಗಳಿಗಾಗಿ ಅಂಬಿ ಮೃತ ದೇಹವನ್ನು ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯದ ವಿಶ್ವೇಶರಯ್ಯ ಕ್ರೀಡಾಂಗಣಕ್ಕೆ ರವಾನಿಸಲಾಗಿತ್ತು.

ಭಾನುವಾರ ರಾತ್ರಿ ಚಳಿಯನ್ನು ಲೆಕ್ಕಿಸದೇ ತಮ್ಮ ನೆಚ್ಚಿನ ನಟ, ಜನನಾಯಕ ಅಂತಿಮ ದರ್ಶನ ಪಡೆದರು. ಸೋಮವಾರ ನವೆಂಬರ್ 25ರಂದು ಬೆಳಗ್ಗೆ ಅದೇ ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಾಯ್ತು. ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ಮೂಲಕ ಕಂಡೀರವ ಸ್ಟುಡಿಯೋ ತಲುಪಿಸಲಾಯ್ತು. ವಿಧಿವಿಧಾನಗಳ ಮೂಲಕ ಕುಟುಂಬಸ್ಥರು, ಹಿರಿಯ ನಟರು, ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.

ನಿರ್ದೇಶಕ ಎ.ಆರ್.ಬಾಬು:
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಿರ್ದೇಶಕ, ನಟ ಎ.ಆರ್. ಬಾಬು ಡಿಸೆಂಬರ್ 4ರಂದು ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದ್ರು. ನಟ ಮತ್ತು ನಿರ್ದೇಶಕರಾಗಿದ್ದ ಎ.ಆರ್. ಬಾಬು ಚಂದನವನದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಬಾಬು ಅವರಿಗೆ 56 ವರ್ಷ ವಯಸ್ಸಾಗಿತ್ತು. ಹಲೋ ಯಮ, ಖಳನಾಯಕ, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ, ಕಾಸಿದ್ದವನೇ ಬಾಸು, ಸಪ್ನೋಂಕಿ ರಾಣಿ, ಚಮ್ಕಾಯಿಸಿ ಚಿಂದಿ ಉಡಾಯಿಸಿ, ಕೂಲಿ ರಾಜ, ಮರುಜನ್ಮ ಸಿನಿಮಾಗಳು ಬಾಬು ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದವು. ಚಂದನವನದ ಹಿರಿಯ ನಿರ್ದೇಶಕರಾಗಿದ್ದ ಬಾಬು ಅವರ ಗರಡಿಯಲ್ಲಿ ಜೋಗಿ ಪ್ರೇಮ್ ಪಳಗಿದ್ದರು. ನಿರ್ದೇಶಕನ ಸಾವಿಗೆ ಸ್ಯಾಂಡಲ್‍ವುಡ್ ಗಣ್ಯರು ಸಂತಾಪ ಸೂಚಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button