ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ 2021ರಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಕನ್ನಡ ಸಿನಿಮಾ ರಂಗದ ಅನೇಕ ಗಣ್ಯರು ನಿನ್ನೆ ಸಂಜೆ ಖಾಸಗಿ ಹೋಟೆಲ್ ನಲ್ಲಿ ಭೇಟಿ ಮಾಡಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ
ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ‘ಇದೊಂದು ಅನೌಪಚಾರಿಕ ಭೇಟಿ. ಆದರೆ, ಉಪಯುಕ್ತ ಚರ್ಚೆ ನಡೆಯಿತು. ಕೇಂದ್ರದಿಂದ ಸಿನಿಮಾ ರಂಗಕ್ಕೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಕೇಂದ್ರ ಸಚಿವರು ಮಾತನಾಡಿದರು. ಕನ್ನಡ ಸಿನಿಮಾ ರಂಗದಲ್ಲಿರುವ ಸೆನ್ಸಾರ್ ಸಮಸ್ಯೆ, ಆನಿಮಲ್ ಬೋರ್ಡ್ ನಿಂದ ಆಗುತ್ತಿರುವ ತೊಂದರೆ, ಫಿಲ್ಮ್ ಸಿಟಿ ಮತ್ತು ಪೈರಸಿಯಿಂದಾಗಿ ಚಿತ್ರೋದ್ಯಮಕ್ಕೆ ಆಗುತ್ತಿರುವ ಹಾನಿಯ ಕುರಿತಾಗಿ ಅವರೊಂದಿಗೆ ಮಾತನಾಡಿದೆವು. ಅವರು ಕೂಡ ನಮ್ಮ ಮನವಿಗೆ ಸ್ಪಂದಿಸಿ, ಸೂಕ್ತ ರೀತಿಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ’ ಎಂದರು. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ
ಇದೊಂದು ಪೂರ್ವಯೋಜಿತ ಭೇಟಿ ಆಗದೇ ಇದ್ದರೂ, ಕೇಂದ್ರ ಸಚಿವರು ಭೇಟಿಗೆ ಅವಕಾಶ ನೀಡಿ, ಸ್ಯಾಂಡಲ್ ವುಡ್ ನ ಅನೇಕ ಸಮಸ್ಯೆಗಳನ್ನು ಆಲಿಸಿದ್ದಾರಂತೆ. ಚಿತ್ರೋದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಸಚಿವರು ಕೂಡ ಅನೇಕ ಸಲಹೆಗಳನ್ನೂ ನೀಡಿದ್ದಾರಂತೆ. ಅಲ್ಲದೇ, ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಅವರು ತಿಳಿಸಿದ್ದಾರಂತೆ. ಇದನ್ನೂ ಓದಿ : ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ನಟ ರಮೇಶ್ ಅರವಿಂದ್, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ನಾಗಣ್ಣ, ಅನೂಪ್ ಭಂಡಾರಿ, ಇಂದ್ರಜಿತ್ ಲಂಕೇಶ್, ಸತ್ಯಪ್ರಕಾಶ್, ಪವನ್ ಒಡೆಯರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹಿರಿಯ ನಿರ್ದೇಶಕ ನಾಗಭರಣ, ನಿರ್ಮಾಪಕರಾದ ಜಾಕ್ ಮಂಜು, ಎನ್.ಎಸ್.ರಾಜ್ ಕುಮಾರ್, ನಟಿಯರಾದ ಸುಧಾರಾಣಿ, ಅನು ಪ್ರಭಾಕರ್, ಹರ್ಷಿಕಾ ಪೂಣಚ್ಚ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭೇಟಿಯ ತಂಡದಲ್ಲಿದ್ದರು.