– ನಿಗಮದಲ್ಲಿ ಅಕ್ರಮ ನಡೆದಿದೆ ಎಂದು ದೂರು ಕೊಟ್ಟಿದ್ದೇ ನಾನು
– ತನಿಖೆ ಆಗ್ರಹಿಸಿದವರ ಮೇಲೆಯೇ ದಾಳಿ ನಡೆದಿದೆ: ವಲ್ಯಾಪುರೆ ಕಿಡಿ
ಕಲಬುರಗಿ: ವಿಧಾನ ಪರಿಷತ್ (Vidhan Parishad) ಬಿಜೆಪಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಸುನಿಲ್ ವಲ್ಯಾಪುರೆ (Sunil Vallyapure) ಮನೆ ಮೇಲೆ ಸಿಐಡಿ (CID) ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.
2022ರಲ್ಲಿ ಸುನೀಲ್ ವಲ್ಯಾಪುರೆ ಪುತ್ರ ವಿನಯ್ ವಲ್ಯಾಪುರೆಯಿಂದ ಭೋವಿ ನಿಗಮದಲ್ಲಿ ಅಕ್ರಮದ (Bhovi Development Corporation) ಕುರಿತು ದೂರು ದಾಖಲಾಗಿತ್ತು. ಒಟ್ಟು ನಿಗಮದ 12 ಕೋಟಿ ರೂ. ಹಣ ದುರ್ಬಳಕೆ ಆರೋಪದ ಮಾತು ಕೇಳಿ ಬಂದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದ ಸಿಐಡಿ, ನಗರದ ಸಂತೋಷ್ ಕಾಲೊನಿಯಲ್ಲಿನ ಮನೆ ಮೇಲೆ ಸಿಐಡಿ ಡಿಎಸ್‌ಪಿ ಅಸ್ಲಂ ಬಾಷಾ ಹಾಗೂ 4 ಜನ ಸಿಬ್ಬಂದಿ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.
2022 ರಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿತ್ತು. ನಿಗಮದ ನಾನಾ ಯೋಜನೆಗಳಿಗೆ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ನಿಗಮದ ಹಣವನ್ನು ವಿನಯ್ ವಲ್ಯಾಪುರೆ ತಮ್ಮ ಓಡೆತನದ ಸೋಮನಾಥೇಶ್ವರ ಎಂಟರ್ಪ್ರೈಸಸ್ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ದೂರು ದಾಖಲಾಗಿತ್ತು.
6 ಗಂಟೆ ಶೋಧ
ಸಿಐಡಿ ಡಿಎಸ್‌ಪಿ ಹಾಗೂ ನಾಲ್ವರು ಸಿಬ್ಬಂದಿ ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆವರೆಗೆ ಶೋಧ ನಡೆಸಿದ್ದಾರೆ. ಈ ವೇಳೆ ಮನೆಯ ಇಂಚಿಂಚು ಜಾಲಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಲವು ದಾಖಲೆಗಳು ಹಾಗೂ ಮನೆಯಲ್ಲಿ ಕಂಪ್ಯೂಟರ್ ಸೇರಿ ಡಿಜಿಟಲ್ ದಾಖಲೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಕೆಲವು ದಾಖಲೆ ಕೊಂಡೊಯ್ದಿದ್ದಾರೆ ಎಂಬ ಮಾಹಿತಿ ಇದೆ.
ತನಿಖೆಗೆ ಎಲ್ಲ ರೀತಿಯ ಸಹಕಾರ: ವಲ್ಲಾಪುರೆ
ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಹಿಂದೆ ನಮ್ಮ ಸರ್ಕಾರಕ್ಕೆ ನಾನೇ ಮನವಿ ಮಾಡಿದ್ದೆ. ಇದೀಗ ತನಿಖೆ ಮಾಡುವ ಎಂದವರ ಮೇಲೆ ತನಿಖೆ ನಡೆಸುತ್ತಿದ್ದಾರೆ ಎಂದು ಸುನೀಲ್ ವಲ್ಲಾಪುರೆ ಹೇಳಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ 1 ಕೆಜಿ ಚಿನ್ನ ಕದ್ದು ತೀರ್ಥಹಳ್ಳಿಯಲ್ಲಿ ಹೂತಿಟ್ಟಿದ್ದ ಖತರ್ನಾಕ್ ಕಳ್ಳ!
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಮಾಡಿ ಎಂದವರ ಮನೆಗೆ ಸರ್ಚ್ ವಾರಂಟ್ ಪಡೆದು ಬಂದಿದ್ದಾರೆ. ಪರಿಸ್ಥಿತಿ ಎಲ್ಲಿಗೆ ಬಂದಿದೆ ನೋಡಿ? ಈಗಾಗಲೇ ಪ್ರಕರಣದಲ್ಲಿ ಕೆಲವು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ನಮ್ಮ ಕುಟುಂಬದ ಯಾರೂ ಭೋಮಿ ನಿಗಮದ ಅಕ್ರಮದಲ್ಲಿ ಭಾಗಿಯಾಗಿಲ್ಲ. ಸಿಐಡಿಯಲ್ಲಿದ್ದ ಪ್ರಕರಣವನ್ನ ಎಸ್‌ಐಟಿಗೆ ವರ್ಗಾವಣೆ ಆಗಿದೆ. ಈ ಕುರಿತು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.