ದುಬೈ: ಕೇರಳ ಮೂಲದ ಕ್ರಿಶ್ಚಿಯನ್ ಉದ್ಯಮಿಯೊಬ್ಬರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆಂದು ಪ್ರತ್ಯೇಕ ಮಸೀದಿ ನಿರ್ಮಿಸುವುದರೊಂದಿಗೆ ರಂಜಾನ್ ತಿಂಗಳಲ್ಲಿ ಇಫ್ತಾರ್ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಕೇರಳದ ಕಯಾಕುಲಂ ಮೂಲದವರಾಗಿರುವ ಉದ್ಯಮಿ ಸಾಜಿ ಚೆರಿಯನ್(49) 2003ರಿಂದ ಯುಎಇನಲ್ಲಿ ವಾಸವಾಗಿದ್ದಾರೆ. ತಾವು ಕ್ರಿಶ್ಚಿಯನ್ ಆಗಿದ್ದರು ಧರ್ಮಬೇಧ ಮರೆತು ಯುಎಇನಲ್ಲಿ ಮಸೀದಿ ಕಟ್ಟಿಸಿದ್ದಾರೆ. ಜೊತೆಗೆ ರಂಜಾನ್ ತಿಂಗಳ ಪೂರ್ತಿ 800 ಮಂದಿ ಜನರಿಗೆ ಇಫ್ತಾರ್ ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದಾರೆ.
ಪ್ರತಿನಿತ್ಯ ನಮಾಜ್‍ಗೆ ತಮ್ಮ ಸಂಸ್ಥೆಯ ಸಿಬ್ಬಂದಿ ಸಂಬಳದ ಹಣ ಖರ್ಚು ಮಾಡಿಕೊಂಡು ಹೋಗುತ್ತಿರುವುದನ್ನು ಗಮನಿಸಿ, ಈ ಹಣವನ್ನು ಉಳಿಸಲು ಉದ್ಯಮಿ ಸಾಜಿ ಈ ಉಪಾಯ ಮಾಡಿದ್ದಾರೆ. ಸಿಬ್ಬಂದಿಗಾಗಿ ಮಸೀದಿಯನ್ನೂ ನಿರ್ಮಿಸಿದ್ದಾರೆ. ಮಸೀದಿಗೆ `ಮೇರಿ ದಿ ಮದರ್ ಆಫ್ ಜೀಸಸ್’ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಪ್ರತಿನಿತ್ಯ ಇಫ್ತಾರ್ ಊಟದಲ್ಲಿ ಬಿರಿಯಾನಿ, ಹಣ್ಣು, ಖರ್ಜೂರ ಸೇರಿದಂತೆ ಹಲವು ಖಾದ್ಯಗಳನ್ನು ಸಿಬ್ಬಂದಿಗೆ ನೀಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಚೆರಿಯನ್, ಸಿಬ್ಬಂದಿ ನಮಾಜ್ ಮಾಡಲು ದೂರದ ಪ್ರದೇಶಕ್ಕೆ ತೆರಳಬೇಕಾಗಿತ್ತು. ಹಾಗೆಯೇ ಇದಕ್ಕಾಗಿ ಸಂಬಳದ ಹಣವನ್ನು ಖರ್ಚು ಮಾಡುತ್ತಿದ್ದರು. ಜೊತೆಗೆ ಇಫ್ತಾರ್ ಊಟಕ್ಕೂ ಹಣ ಖರ್ಚಾಗುತ್ತಿತ್ತು. ಆದ್ದರಿಂದ ಸಿಬ್ಬಂದಿಯ ಹಣ ಉಳಿಸಲು ಈ ರೀತಿ ಮಾಡಿದ್ದೇನೆ. ರಂಜಾನ್ ಮುಗಿಯುವ ತನಕ ಒಂದೇ ರೀತಿಯ ಆಹಾರ ನೀಡಿದರೆ ಅವರಿಗೆ ಬೇಸರವಾಗುತ್ತದೆ. ಹೀಗಾಗಿ ವಿವಿಧ ರೀತಿಯ ಬಿರಿಯಾನಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪತ್ರಿಕೆಯೊಂದರ ವರದಿ ಪ್ರಕಾರ ರಂಜಾನ್ ಆಚರಣೆಯ 17 ನೇ ರಾತ್ರಿಯಂದು ಈ ಮಸೀದಿಯನ್ನು ಉದ್ಘಾಟಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ದುಬೈನಲ್ಲಿ ಅಲ್ ಹೈಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈಸ್ಟ್ ವಿಲ್ಲೆ ರಿಯಲ್ ಎಸ್ಟೇಟ್ ಸಂಕೀರ್ಣದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ. ಇದು ಒಂದೇ ಸಮಯದಲ್ಲಿ 250 ಮಂದಿ ಪ್ರಾರ್ಥನೆಯನ್ನು ಸಲ್ಲಿಸುವಷ್ಟು ದೊಡ್ಡ ಸಭಾಂಗಣವನ್ನು ಹೊಂದಿದೆ. ಅಷ್ಟೇ ಅಲ್ಲದೆ ಮಸೀದಿಯ ಹೊರಗಡೆ ತೆರೆದ ಆವರಣದಲ್ಲಿ 700 ಮಂದಿ ಆರಾಧಕರು ಪ್ರಾರ್ಥನೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.