ಚಿತ್ರಕಥಾ: ಓದು ಅರ್ಧಕ್ಕೇ ಬಿಟ್ಟು ಕಲೆಯ ಕರೆಗೆ ಓಗೊಟ್ಟ ಯಶಸ್ವಿ!

Public TV
2 Min Read
chitra katha d

ಬೆಂಗಳೂರು: ಎಳವೆಯಿಂದಲೇ ಯಾವುದಾದರೊಂದು ಗುಂಗಿನ ಚುಂಗು ಹಿಡಿದು ಮುಂದುವರೆದವರೇ ನಾನಾ ಸಾಧನೆಯ ಹರಿಕಾರರಾಗಿದ್ದಾರೆ. ಕೆಲ ಮಂದಿ ಈ ಸಾಧನೆಯ ಹಾದಿಯಲ್ಲಿ ಮೈಲಿಗಲ್ಲುಗಳನ್ನಾದರೂ ನೆಟ್ಟು ನಿರಾಳವಾಗುತ್ತರೆ. ಇದೇ ರೀತಿ ಚಿತ್ರರಂಗದ ಕನಸು ಹೊತ್ತು ಚಿತ್ರಕಥಾ ಎಂಬ ಚಿತ್ರದ ಮೂಲಕ ಸಾಧನೆಯ ಹಾದಿಯಲ್ಲಿ ಮೊದಲ ಹೆಜ್ಜೆ ಎತ್ತಿಟ್ಟಿರುವವರು ನಿರ್ದೇಶಕ ಯಶಸ್ವಿ ಬಾಲಾದಿತ್ಯ. ಈಗಾಗಲೇ ಈ ಸಿನಿಮಾ ಬಗ್ಗೆ ಹೊತ್ತಿಕೊಂಡಿರೋ ಕ್ರೇಜ್ ಗಮನಿಸಿದರೆ ಅವರ ಚೊಚ್ಚಲ ಪ್ರಯತ್ನ ಯಶಸ್ವಿಯಾಗೋ ಲಕ್ಷಣಗಳೇ ಢಾಳಾಗಿವೆ.

Chitra katha Yashaswi Baaladitya

ಹೆಚ್ಚೂ ಕಡಿಮೆ ಹೈಸ್ಕೂಲು ದಿನಗಳಲ್ಲಿಯೇ ಯಶಸ್ವಿ ಬಾಲಾದಿತ್ಯ ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಆಸೆ ಹೊಂದಿದ್ದವರು. ಪಿಯುಸಿ ವ್ಯಾಸಂಗ ಮಾಡುವ ಹೊತ್ತಿಗೆಲ್ಲ ಆ ಆಸೆ ತೀವ್ರವಾಗಿತ್ತು. ಇದರ ಸೆಳೆತಕ್ಕೆ ಸಿಕ್ಕು ಪಿಯುಸಿಗೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿಕೊಂಡು ಆನಿಮೇಷನ್ ಕೋರ್ಸಿಗೆ ಸೇರಿಕೊಂಡಿದ್ದವರು ಯಶಸ್ವಿ. ಹೀಗೆ ಆನಿಮೇಷನ್ ಕೋರ್ಸು ಮಾಡಿಕೊಂಡು ಆ ಮೂಲಕವೇ ತಂತ್ರಜ್ಞನಾಗಿ ಚಿತ್ರರಂಗ ಪ್ರವೇಶ ಮಾಡೋದು ಅವರ ಕನಸಾಗಿತ್ತು. ಆ ಕೋರ್ಸನ್ನು ಮುಗಿಸಿಕೊಂಡು ಎಣಿಕೆಯಂತೆಯೇ ಚಿತ್ರರಂಗದ ಭಾಗವಾದ ಅವರ ಪಾಲಿಗೆ ಅವಕಾಶಗಳು ವಿವಿಧ ರೂಪದಲ್ಲಿ ಬಾಗಿಲು ತೆರೆಯಲಾರಂಭಿಸಿದ್ದವು.

chitra katha b

ಹೀಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ತನ್ನ ಪ್ರಧಾನ ಗುರಿ ನಿರ್ದೇಶನವೇ ಎಂಬುದನ್ನು ಯಶಸ್ವಿ ಖಚಿತಪಡಿಸಿಕೊಂಡಿದ್ದರು. ಇದರ ಆರಂಭವೆಂಬಂತೆ 2009ರಲ್ಲಿ ಲಾಲಿ ಎಂಬ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದ ಅವರಿಗೆ ಫಿಲಂ ಮೇಕಿಂಗ್‍ನತ್ತ ತೀವ್ರವಾದ ಆಸಕ್ತಿ ಮೊಳೆತುಕೊಂಡಿತ್ತು. ಬಳಿಕ ಸಿನಿಮಾ ರೂಪಿಸೋ ಪಟ್ಟುಗಳನ್ನು ಅರಿಯುವ ಉದ್ದೇಶದಿಂದಲೇ ರಣತಂತ್ರ ಎಂಬ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ನಿರ್ದೇಶಕನಾಗೋ ಕನಸಿಗೆ ಶುಭಾರಂಭ ದೊರೆತಿತ್ತು. ಆ ನಂತರ ಒಂದಷ್ಟು ಚಿತ್ರಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಎಲ್ಲವನ್ನೂ ಅರಿತುಕೊಂಡಿದ್ದರು.

chitra katha 1 1

ಆ ಬಳಿಕ ಟಿವಿ ಆಡ್ ಮತ್ತು ಮ್ಯೂಸಿಕ್ ವೀಡಿಯೋ ರೂಪಿಸೋ ಕೆಲಸವನ್ನೂ ಮಾಡಲಾರಂಭಿಸಿದ ಯಶಸ್ವಿ ಬಾಲಾದಿತ್ಯರಿಗೆ ಈ ಅವಧಿಯಲ್ಲಿಯೇ ನಿರ್ಮಾಪಕರೊಬ್ಬರ ಪರಿಚಯವಾಗಿತ್ತು. ಅದರ ಫಲವಾಗಿಯೇ `ಈ’ ಎಂಬ ಚಿತ್ರದಲ್ಲಿ ಕೋ ಡೈರೆಕ್ಟರ್ ಆಗಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಆ ಚಿತ್ರ ಕಾರಣಾಂತರಗಳಿಂದ ಪೂರ್ಣಗೊಂಡಿರಲಿಲ್ಲ. ಈ ಚಿತ್ರದ ಮೂಲಕವೇ ಸುಜೀತ್ ರಾಥೋಡ್ ಅವರ ಪರಿಚಯವಾಗಿತ್ತು. ಈ ಚಿತ್ರ ಅರ್ಧಕ್ಕೇ ನಿಲ್ಲುತ್ತಲೇ ಮುಂದಿನ ಹಾದಿಯ ಬಗ್ಗೆ ಯೋಚಿಸಿದ ಯಶಸ್ವಿ ಸುಜಿತ್ ಅವರಿಗೆ ಚಿತ್ರಕಥಾದ ಕಥೆ ಹೇಳಿದ್ದರು. ಅದನ್ನವರು ಒಂದೇ ಗುಕ್ಕಿಗೆ ಒಪ್ಪಿಕೊಂಡಿದ್ದರು.

chitra katha

ಹೀಗೆ ಹಲವಾರು ವರ್ಷಗಳ ಕಾಲ ನಾನಾ ಅಡೆತಡೆಗಳನ್ನು ದಾಟಿಕೊಂಡು ಬಂದಿರೋ ಯಶಸ್ವಿ ಇದೀಗ ಯಶಸ್ವಿಯಾಗಿಯೇ ಚಿತ್ರಕಥಾ ಚಿತ್ರವನ್ನು ರೂಪಿಸಿದ್ದಾರೆ. ಕನ್ನಡದ ಮಟ್ಟಿಗೆ ಅಪರೂಪದ ಕಥೆ ಹೊಂದಿರೋ ಚಿತ್ರಕಥಾ ಈಗಾಗಲೇ ದೊಡ್ಡ ಮಟ್ಟದಲ್ಲಿಯೇ ಕ್ರೇಜ್‍ಗೆ ಕಾರಣವಾಗಿದೆ. ಇದೇ ಹನ್ನೆರಡನೇ ತಾರೀಕಿನಂದು ಅಂದರೆ ಈ ವಾರವೇ ತೆರೆ ಕಾಣಲಿರೋ ಈ ಚಿತ್ರ ತನ್ನ ಮೊದಲ ಹೆಜ್ಜೆಗೆ ಹೊಸಾ ಶಕ್ತಿ ತುಂಬಲಿದೆ ಎಂಬ ಭರವಸೆ ಯಶಸ್ವಿ ಬಾಲಾದಿತ್ಯರದ್ದು.

Share This Article
Leave a Comment

Leave a Reply

Your email address will not be published. Required fields are marked *