ಚಿತ್ರದುರ್ಗ: ಬೆಟ್ಟದಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ 300 ಕುರಿಗಳು ಆಹುತಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹೊರಕೇರೆದೇವಪುರದ ಬಳಿ ನಡೆದಿದೆ.
ಹೊಸದುರ್ಗ ತಾಲೂಕಿನ ಅಮೃತಾಪುರ ಗ್ರಾಮದ ತಿಮ್ಮಪ್ಪ ಎಂಬವರಿಗೆ ಸೇರಿರುವ ಒಂದು ಸಾವಿರ ಕುರಿಗಳನ್ನು ಮೇಯಿಸಲು ಹೊರಕೆರೆದೇವರಪುರ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಗಿಡಗಳಿಗೆ ಹತ್ತಿದ ಬೆಂಕಿಯಿಂದಾಗಿ 300 ಕುರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಉಳಿದ 700 ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ.
ಇದರಿಂದಾಗಿ ರೈತ ತಿಮ್ಮಪ್ಪನಿಗೆ ಸುಮಾರು 12 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಈ ಪ್ರಕರಣ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದೂ, ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಕುರಿ ಕಳೆದುಕೊಂಡ ರೈತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಉಣ್ಣೆ ಅಭಿವೃದ್ಧಿ ನಿಗಮದಿಂದ ಅಧಿಕಾರಿಗಳು ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದಾರೆ.