Connect with us

Chitradurga

ಸರ್ಕಾರದ ಖಡಕ್ ಎಚ್ಚರಿಕೆಯ ಬೆನ್ನಲ್ಲೇ 2 ಸಾವಿರ ಅಕ್ರಮ ಬಿಪಿಎಲ್ ಕಾರ್ಡ್ ವಾಪಸ್

Published

on

ಚಿತ್ರದುರ್ಗ: ಸರ್ಕಾರದಿಂದ ಕಡು ಬಡವರಿಗೆ ಎಂದು ನೀಡುತ್ತಿರುವ ಬಿಪಿಎಲ್ ಕಾರ್ಡ್ ಪಡೆದು ಅಕ್ಕಿ, ಬೇಳೆ ಪಡೆಯುತಿದ್ದ ಸಾವಿರಾರು ಜನ ಅಕ್ರಮ ಫಲಾನುಭವಿಗಳು ತಮ್ಮ ಪಡಿತರ ಕಾರ್ಡ್ ಗಳನ್ನು ಸರ್ಕಾರಕ್ಕೆ ವಾಪಸ್ ನೀಡಿದ್ದಾರೆ. ಸರ್ಕಾರ ನೀಡಿದ ಖಡಕ್ ಎಚ್ಚರಿಕೆಗೆ ಹೆದರಿದ ಫಲಾನುಭಾವಿಗಳು ಅನಿವಾರ್ಯವಾಗಿ ಆಹಾರ ಇಲಾಖೆಗೆ ಬಂದು ಪಡಿತರ ಚೀಟಿಗಳನ್ನು ವಾಪಸ್ ಮಾಡಿದ್ದಾರೆ.

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಸರ್ಕಾರ ತಪ್ಪು ಮಾಹಿತಿ ನೀಡಿ ಪಡೆದ ಅಕ್ರಮ ಬಿಪಿಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಣೆಯಿಂದ ಸರ್ಕಾರಕ್ಕೆ ಮರಳಿಸಿದರೆ ಉತ್ತಮ. ಇಲ್ಲದೇ ಹೋದಲ್ಲಿ ತಾವು ಪಡಿತರ ಚೀಟಿ ಪಡೆದ ದಿನದಿಂದ ಇಲ್ಲಿಯವರೆಗೂ ಪಡೆದ ಪಡಿತರವನ್ನು, ಹಣದ ರೂಪದಲ್ಲಿ ವಾಪಸ್ ಮರಳಿಸುವುದಲ್ಲದೇ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ ಎಂದು ಆಹಾರ ಇಲಾಖೆ ಎಚ್ಚರಿಸಿತ್ತು.

ಈ ಆದೇಶದಿಂದ ಎಚ್ಚತ್ತುಕೊಂಡ ಅಕ್ರಮ ಪಡಿತರ ಕಾರ್ಡ್ ಹೊಂದಿದ್ದ ಚಿತ್ರದುರ್ಗ ಜಿಲ್ಲೆಯ ಹಲವಾರು ಕುಟುಂಬಗಳು ಸುಮಾರು 2,321 ಕಾರ್ಡ್ ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಅದರಲ್ಲಿ 265 ಕಾರ್ಡಗಳನ್ನು ಸ್ವಯಂಪ್ರೇರಿತರಾಗಿ ಕಚೇರಿಗೆ ಬಂದು ಹಿಂತಿರುಗಿಸಿದ್ದು, ಅವರಲ್ಲಿ 148 ಸರ್ಕಾರಿ ನೌಕರರು ಹಾಗೂ ಇತರ ಕಾರಣಗಳಿಂದ ಕಾರ್ಡ್ ಪಡೆದಿದ್ದ 105 ಸೇರಿದಂತೆ ಒಟ್ಟು 265 ಅಕ್ರಮ ಫಲಾನುಭವಿಗಳು ತಮ್ಮ ಪಡಿತರ ಚೀಟಿಯನ್ನು ಸ್ವಯಂ ಪ್ರೇರಣೆಯಿಂದ ವಾಪಸ್ ಮಾಡಿದ್ದಾರೆ.

ಹಲವು ಜನರ ಬಳಿ ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್‍ಗಳಿವೆ. ಆದರೆ ಅವು ಇನ್ನು ವಾಪಸಾಗಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಸಹ ಸುಮ್ಮನೆ ಕುಳಿತಿಲ್ಲ. ಸ್ವಯಂಪ್ರೇರಣೆಯಿಂದ ವಾಪಸ್ ಮಾಡದೇ ಹೋದಲ್ಲಿ ಅವರ ವಿರುದ್ಧ ತನಿಖೆ ನಡೆಸಲು ಇಲಾಖೆ ಈಗ ಸಿದ್ಧತೆ ನಡೆಸುತ್ತಿದೆ.

ಜೊತೆಗೆ ಇ-ಕೆವೈಸಿ ಮೂಲಕ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರ ಬಯೋ ಅಥೆಂಟಿಕೇಶನ್ ಮಾಡಲಾಗುತ್ತಿದೆ. ಸದ್ಯಕ್ಕೆ 3,54,143 ಜನಸಂಖ್ಯೆಯಿದ್ದು, 4,11,439 ಒಟ್ಟು ಕಾರ್ಡ್‍ಗಳಿವೆ. ಅದರಲ್ಲಿ 1,24,004 ಇ-ಕೆವೈಸಿ ಬಿಪಿಎಲ್ ಕಾರ್ಡ್‍ಗಳು ಮತ್ತು 6,942 ಎಪಿಎಲ್ ಕಾರ್ಡ್ ಗಳಿವೆ. 1,30,946 ಒಟ್ಟು ಇ-ಕೆವೈಸಿಯಾದ ಕಾರ್ಡ್ ಗಳು ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಹೊಂದಿರುವವರು ಅದಷ್ಟು ಬೇಗ ಸಂಬಂಧ ಪಟ್ಟ ಇಲಾಖೆ ಹಿಂತಿರುಗಿಸಬೇಕು. ಇಲ್ಲವಾದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

Click to comment

Leave a Reply

Your email address will not be published. Required fields are marked *