ಚಿತ್ರದುರ್ಗ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ರಣಕಹಳೆ ಮೊಳಗಿಸಲಿದ್ದಾರೆ.
ಸಮಾವೇಶದ ವೇಳೆಯಲ್ಲೆ ಪ್ರಧಾನಿ ನರೇಂದ್ರ ಮೋದಿ ದುರ್ಗದ ಉಪಾಧ್ಯ ಹೋಟೆಲ್ ನ ದೋಸೆ ಸವಿಯಲಿದ್ದು, ಮೋದಿಗೆ ಕಮಲದ ಕಸೂತಿ ಇರುವ ಕೇಸರಿ ಕಂಬಳಿ ಹೊದಿಸಿ ಸ್ಥಳೀಯ ನಾಯಕರು ಸನ್ಮಾನ ಮಾಡಲಿದ್ದಾರೆ.
ಚಿತ್ರದುರ್ಗ, ದಾವಣಗೆರೆ, ತುಮಕೂರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮೋದಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಸಮಾವೇಶಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಸಂಪೂರ್ಣಗೊಂಡಿದ್ದು ಮಧ್ಯಾಹ್ನ 2:10 ನಿಮಿಷಕ್ಕೆ ಮೋದಿ ವಿಜಯ ಸಂಕಲ್ಪ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
8 ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಮೋದಿ ಕಾಂಗ್ರೆಸ್ ಕೋಟೆಯನ್ನ ಕೇಸರಿಯನ್ನಾಗಿ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ ಪರಿಣಾಮವೇ ಚಿತ್ರದುರ್ಗದಲ್ಲಿ 5 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಹಿನ್ನೆಲೆಯಲ್ಲೆ 8 ತಿಂಗಳ ಅವಧಿಯಲ್ಲೆ ಮೋದಿ ಮತ್ತೊಮ್ಮೆ ಕೋಟೆ ನಾಡಿನಲ್ಲಿಂದು ಭಾಷಣ ಮಾಡಲಿದ್ದಾರೆ.
ಇಂದು ಮಧ್ಯಾಹ್ನ ಚಿತ್ರದುರ್ಗದ ಚಳ್ಳಕೆರೆಯ ಡಿಆರ್ ಡಿಓ ಸಂಸ್ಥೆಗೆ ಆಗಮಿಸಿ ನಂತರ ಅಲ್ಲಿಂದ ದುರ್ಗದ ಒನಕೆ ಓಬವ್ವ ಕ್ರೀಡಾಂಗಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸುವ ಮೋದಿ ನಂತರ ರಸ್ತೆ ಮಾರ್ಗವಾಗಿ ಮುರುಗರಾಜೇಂದ್ರ ಕೀಡಾಂಗಣದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮೋದಿ ಸಮಾವೇಶಕ್ಕೆ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಆಗಮಿಸುವ ಹಿನ್ನೆಲೆಯಲ್ಲಿ ಸಾಕಷ್ಟು ಬಂದೋಬಸ್ತ್ ಸಹ ಏರ್ಪಡಿಸಲಾಗಿದೆ.