ಚಿತ್ರದುರ್ಗ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಹಿರಿಯೂರು ತಾಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಎಂಬಂತೆ ಬೀಗುತ್ತಿದೆ. ಶಿಕ್ಷಣ ಸೌಲಭ್ಯ, ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಂತೆ ಎಲ್ಲಾ ಆಯಾಮದಲ್ಲಿ ಶಾಲೆ ಪೈಪೋಟಿ ನೀಡುತ್ತಿದ್ದು, ಈಗ ತನ್ನ ವಿಶೇಷ ಆಕರ್ಷಕ ಸೊಬಗಿನಿಂದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಗೆ ಸುಮಾರು 50 ಜನ ಚಿತ್ರಕಲಾ ವಿದ್ಯಾರ್ಥಿಗಳು ಬೆಂಗಳೂರಿನಿಂದ ಇಂದು ಆಗಮಿಸಿದ್ದು ಬಣ್ಣದ ಮೆರೆಗು ನೀಡಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯು ಇಲ್ಲಿಯವರಿಗೂ ಸುಮಾರು 150 ಸರ್ಕಾರಿ ಶಾಲೆಗೆ ಬಣ್ಣದ ಮೆರಗು ನೀಡಿದೆ. ಈಗ 151ನೇ ಸರ್ಕಾರಿ ಶಾಲೆಯಾಗಿ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ತಂಡ ಭೇಟಿ ನೀಡಿದೆ.
Advertisement
Advertisement
ಸುಮಾರು 50 ಜನ ಚಿತ್ರಕಲಾ ವಿದ್ಯಾರ್ಥಿಗಳು ಬಂದಿದ್ದು, ಶಾಲೆಯ ಗೊಡೆಯ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸುವ ಮೂಲಕ ಶಾಲೆಗೆ ಮೆರಗು ನೀಡಿದ್ದಾರೆ. ಎಲ್‍ಕೆಜಿ, ಯುಕೆಜಿ ತರಗತಿಯಿಂದ ಏಳನೇ ತರಗತಿಯ ಮಕ್ಕಳಿಗೆ ಹೂವು, ತರಕಾರಿ, ಹಣ್ಣು, ಆಟಿಕೆ ವಸ್ತುಗಳು, ಪ್ರಾಣಿ-ಪಕ್ಷಿ, ನದಿ ಸರೋವರ, ಬೆಟ್ಟಗುಡ್ಡಗಳ ಚಿತ್ರವನ್ನು ಚಿತ್ರಕಲಾ ವಿದ್ಯಾರ್ಥಿಗಳು ಬಿಡಿಸಿದ್ದಾರೆ. ಚಿತ್ರದುರ್ಗದ ಕೋಟೆ, ಗಾಂಧಿಜೀ, ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಹೀಗೆ ಅನೇಕ ಶ್ರೇಷ್ಠ ಸಾಧಕ ಭಾವಚಿತ್ರವನ್ನು ಎಂಟನೇ ತರಗತಿಯಿಂದ 10ನೇ ತರಗತಿಯ ಕೊಠಡಿಯಲ್ಲಿ ಬಿಡಿಸಲಾಗಿದೆ.
Advertisement
ಈ ಚಿತ್ರಕಲಾ ವಿದ್ಯಾರ್ಥಿಗಳು ಬೆಂಗಳೂರು ಯೂನಿವರ್ಸಿಟಿ, ಚಿತ್ರಕಲಾ ಪರಿಷತ್, ಕಲಾಮಂದಿರ ಬೆಂಗಳೂರು, ದಾವಣಗೆರೆ ವಿದ್ಯಾರ್ಥಿಗಳು ಬಂದಿದ್ದಾರೆ. ಇವರು ಬೇರೆ ಬೇರೆ ಕಡೆ ವಿದ್ಯಾಭ್ಯಾಸ ಮಾಡಿ ಬಂದಿದ್ದು, ಈಗಾಗಲೇ ಹಾಸನ ಬೆಂಗಳೂರು ದಾವಣಗೆರೆ ಮೈಸೂರು ರಾಜ್ಯದ ವಿವಿಧ ಕಡೆ ಶಾಲೆಗಳಿಗೆ ಭೇಟಿ ಕೊಟ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ಯಾವುದೇ ಹಣವನ್ನು ಪಡೆಯುದೇ ಅವರ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗಳಿಗೆ ಮಾತ್ರ ನಾವು ಈ ರೀತಿಯಾದ ಚಿತ್ರಗಳನ್ನು ಬರೆಯುತ್ತಿರುವುದಾಗಿ ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.
Advertisement
ಕೆಲವು ಶಾಲೆಗಳಿಗೆ ಅಲ್ಲಿನ ಗ್ರಾಮಸ್ಥರು ಸಹ ಬಣ್ಣದ ವ್ಯವಸ್ಥೆ ಮಾಡಿರುತ್ತಾರೆ. ಅದರ ಜೊತೆಗೆ ನಾವು ಕೂಡ ಒಂದಿಷ್ಟು ಹಣವನ್ನು ಹಾಕಿ ಬಣ್ಣವನ್ನ ತೆಗೆದುಕೊಂಡು ಚಿತ್ರವನ್ನು ಬಿಡಿಸುತ್ತೇವೆ. ನಾವು ಓದಿದ ಸೇವೆಗೋಸ್ಕರ ಹೀಗೊಂದು ಸರ್ಕಾರಿ ಶಾಲೆಗಳಲ್ಲಿ ಚಿತ್ರ ಬರೆಯುತ್ತಿದ್ದೇವೆ. ಸಮಾಜಕ್ಕೆ ಸಂದೇಶವನ್ನು ಕೊಡುವಂತ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಬಾಗಿಲು ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಶ್ರಮಿಸುತ್ತಿದ್ದೇವೆ ಎಂದು ಚಿತ್ರಕಲಾ ವಿದ್ಯಾರ್ಥಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರು ಹಾಗೂ ಸರ್ಕಾರಿ ಶಾಲೆ ಶಿಕ್ಷಕರು ಫುಲ್ ಫಿದಾ ಆಗಿದ್ದಾರೆ.