ಚಿತ್ರದುರ್ಗ: ಜಿಲ್ಲೆಗೊಂದು ಕಾರಿಡಾರ್ ಇಲ್ಲ ಅಥವಾ ಸ್ಮಾರ್ಟ್ ಸಿಟಿನೂ ಇಲ್ಲವೆಂದು ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಎದುರೇ ಡಾ.ಶಿವಮೂರ್ತಿ ಮುರುಘಾ ಶರಣರು ಅಸಮಾಧಾನ ಹೊರಹಾಕಿದರು.
ಮುರುಘಾಮಠದಲ್ಲಿ ನಡೆದ ಮುರುಘಾ ಶರಣರ ಮೂರನೇ ದಶಮಾನೋತ್ಸವ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜಿಲ್ಲೆಯ ಅಭಿವೃದ್ಧಿ ಕಡೆಗಣನೆ ಬಗ್ಗೆ ಪ್ರಸ್ತಾಪಿಸಿದರು. ಚಿತ್ರದುರ್ಗ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆ ನೀಡದಿರುವುದು ನೋವಿನ ಸಂಗತಿಯಾಗಿದೆ. ಈ ಜಿಲ್ಲೆಯ ಅಭಿವೃದ್ಧಿಗೆ ಬಂದ ಹಣ ಸಹ ವಾಪಸ್ ಹೋಗಿದೆ. ಕೇವಲ 2.5 ರಷ್ಟು ಮಾತ್ರ ಬಳಕೆ ಮಾಡಿಕೊಂಡಿದ್ದಾರೆ. ಆದರೆ ಈ ಜಿಲ್ಲೆಯ ಜನ ಐದು ಬಿಜೆಪಿ ಶಾಸಕರನ್ನು ಗೆಲ್ಲಿಸಿದ್ದಾರೆ. ಆದರೂ ಅಭಿವೃದ್ಧಿ ಮಾತ್ರ ಕನಸಾಗಿದೆ. ಚಿತ್ರದುರ್ಗ ಜಿಲ್ಲೆ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಶ್ ನೇತೃತ್ವದ ತಂಡದಿಂದ ಪುರಾತನ ಕಲ್ಯಾಣಿ ಪುನರುಜ್ಜೀವನಕ್ಕೆ ಚಾಲನೆ
ಪ್ರವಾಸಿತಾಣಗಳಾದ ಏಳುಸುತ್ತಿನ ಕೋಟೆ, ಮುರುಘಾಮಠ ಬಿಟ್ಟರೆ ಮತ್ತೇನೂ ಇಲ್ಲವೆಂಬ ಕೂಗು ಜನರದ್ದಾಗಿದ್ದು, ಬಯಲುಸೀಮೆಯ ಬಗ್ಗೆ ಗಮನಹರಿಸಿ ಅಭಿವೃದ್ಧಿ ಮಾಡಲು ಈ ಜಿಲ್ಲೆಯ ಶಾಸಕರು ಮುತುವರ್ಜಿ ವಹಿಸಬೇಕಿದೆ. ಸಚಿವ ಶ್ರೀರಾಮುಲು ಮಠದ ಭಕ್ತರಾಗಿದ್ದೂ, ಚಿತ್ರದುರ್ಗದ ಅಭಿವೃದ್ಧಿ ವಿಚಾರವಾಗಿ ಸಿಎಂ ಜೊತೆ ಚರ್ಚಿಸಬೇಕು ಎಂದು ಹೇಳಿದರು.
ಅದಕ್ಕೆಲ್ಲಾ ಇಚ್ಛಾಶಕ್ತಿ ಇರಬೇಕಿದೆ. ಆದರೂ ನಮ್ಮ ಪಾಲಿಗೆ ಬಸವರಾಜ ಬೊಮ್ಮಾಯಿ ಅದೃಷ್ಟದ ಸಿಎಂ ಎನಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅನುಭಾವಿ ಸಿಎಂ ಆಗಿದ್ದಾರೆ. ಹೀಗಾಗಿ ಕೋಟೆನಾಡಿಗೆ ಅಭಿವೃದ್ಧಿ ಪೂರಕವಾಗಿ ಸರ್ಕಾರ ಸ್ಪಂದಿಸಬೇಕೆಂದು ಮನವಿ ಮಾಡಿದರು. ಆಗ ಮುರುಘಾಶ್ರೀ ಮಾತಿಗೆ ಬೆಂಬಲಿಸಿ ಜನರು ಕೂಗಿ ಕೇಕೆ ಹಾಕಿದರು. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮೌನ ವಹಿಸಿದ್ದು, ಹಾಲಿ ಸಿಎಂ ಬೊಮ್ಮಾಯಿ ಬರದನಾಡಿಗೆ ನೀರಿನೊಂದಿಗೆ, ಇಂಡಸ್ಟ್ರಿಯಲ್ ಟೌನ್ ಶಿಪ್ ನೀಡುವುದಾಗಿ ಘೋಷಿಸಿದರು. ಡಿಸಿಗೆ ಸ್ಥಳ ನಿಗದಿ ಮಾಡುವಂತೆ ಸೂಚಿಸಿದರು. ಇದನ್ನೂ ಓದಿ: ಟಿಜಿ ಕಾರ್ಡ್ ವಿತರಣೆ – ಕರ್ನಾಟಕ ರಾಜ್ಯದಲ್ಲೇ ಬೀದರ್ ನಂಬರ್ 1 ಜಿಲ್ಲೆ