ಚಿತ್ರದುರ್ಗ: ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿ ತರೋದರ ಜೊತೆಗೆ ಕೋಟಿ ಕೋಟಿ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಶಾಲೆಯನ್ನು ನೀವು ನೋಡಿದ್ರೆ ಬಿಡುಗಡೆ ಆಗುತ್ತಿರೋ ಹಣವೆಲ್ಲಾ ಎಲ್ಲಿ ಹೋಗುತ್ತಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ಜಿಲ್ಲೆಯ ಹೊಳಲ್ಕರೆ ತಾಲೂಕಿನ ಕೊಳಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಭೂತ ಬಂಗಲೆಯಂತೆ ಕಾಣುತ್ತಿದೆ. ಇಂತಹ ಪಾಳು ಬಿದ್ದ ಕಟ್ಟಡದಲ್ಲಿಯೇ ಮಕ್ಕಳು ಪಾಠವನ್ನು ಕಲಿಯುತ್ತಿದ್ದಾರೆ.
ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗೆ ಉತ್ತಮ ವ್ಯವಸ್ಥೆ ಮಾತ್ರ ಈವರೆಗೆ ಕಲ್ಪಿಸಲಾಗಿಲ್ಲ. ಈ ಬಗ್ಗೆ ಕೇಳಿದ್ರೆ ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯ ಶಿಕ್ಷಕ ಹನುಮಂತಪ್ಪ ಹೇಳುತ್ತಾರೆ.
Advertisement
Advertisement
ಹಳೆಯ ಶಾಲಾ ಕೊಠಡಿಗಳಲ್ಲಿ ಇಂದಿಗೂ ಇಲ್ಲಿ ಶಾಲೆ ನಡೆಸಲಾಗುತ್ತಿದೆ. ಹೀಗಾಗಿ, ಮಳೆಗಾಲದಲ್ಲಂತೂ ಶಾಲೆಯ ಗೋಡಗಳು ಯಾವಾಗ ಕುಸಿಯುತ್ತವೆ ಎಂಬ ಆತಂಕದಿಂದ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಪಾಠ ಕೇಳುತ್ತಿದ್ದಾರೆ. ಬೇಸಿಗೆಯಲ್ಲಿ ಕಾದ ಕಬ್ಬಿಣದಂತಾದ ಮೇಲ್ಛಾವಣೆಯಿಂದ ತೂರಿ ಬರುವ ಬಿಸಿಲ ಜಳ ಮಕ್ಕಳ ಮೈ ಬೆವರುವಂತೆ ಸುಡುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಈಗಾಗಲೇ ಡಿಡಿಪಿಐ ಕಚೇರಿವರೆಗೆ ಬಂದು ಧರಣಿ ನಡೆಸಿ ಶಾಲಾ ಕಟ್ಟಡಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
Advertisement
Advertisement
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಕೊಳಾಳು ಗ್ರಾಮದ ಸರ್ಕಾರಿ ಶಾಲೆ ದುಸ್ಥಿತಿಯಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳು ಆತಂಕದಲ್ಲೇ ವಿದ್ಯಭ್ಯಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರೂ ಈ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಹಾಗು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv