ಚಿತ್ರದುರ್ಗ: ದಾವಣಗೆರೆಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಗ್ರೀನ್ ಝೋನ್‍ನಲ್ಲಿರುವ ಚಿತ್ರದುರ್ಗದಲ್ಲಿ ಲಾಕ್‍ಡೌನ್ ಸಡಿಲಿಕೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಮಾಡಲಾಗಿದೆ. ಹೀಗಾಗಿ ಸಂಪೂರ್ಣ ಬಂದ್ ಆಗಿದ್ದ ಚಿತ್ರದುರ್ಗ ಜಿಲ್ಲೆ ಈಗ ಯಾವುದೇ ಕೊರೊನಾ ಪ್ರಕರಣ ಇಲ್ಲದೇ ಗ್ರೀನ್ ಝೋನ್‍ನಲ್ಲಿದೆ. ಹೀಗಾಗಿ ಎಂದಿನಂತೆ ಎಲ್ಲಾ ಚಟುವಟಿಕೆಗಳು ಆರಂಭಗೊಂಡಿವೆ. ಅಲ್ಲದೇ ವಾಹನ ಸಂಚಾರ ದಟ್ಟಣೆಯಾಗಿದ್ದು, ಅಂಗಡಿ ಮುಂಗಟ್ಟುಗಳು ತೆರೆದಿದ್ದು, ವ್ಯಾಪಾರ ವಹಿವಾಟು ಚುರುಕಾಗಿದೆ. ಆದರೆ ಪಕ್ಕದ ಜಿಲ್ಲೆ ದಾವಣಗೆರೆಯಲ್ಲಿ ಶುಕ್ರವಾರ ಒಂದೇ ದಿನ 6 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರೋದು ಕೋಟೆನಾಡಿನ ಜರನಲ್ಲಿ ಭಾರೀ ಆತಂಕ ಸೃಷ್ಟಿಸಿದೆ.
ಆದ್ದರಿಂದ ಗ್ರೀನ್ ಝೋನ್‍ನಲ್ಲಿರುವ ಚಿತ್ರದುರ್ಗದಲ್ಲೂ ಇನ್ನಷ್ಟು ದಿನ ಲಾಕ್‍ಡೌನ್ ಮುಂದುವರೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಒಂದು ವೇಳೆ ಲಾಕ್‍ಡೌನ್ ಸಡಿಲಿಕೆಯಿಂದ ಜನರ ಓಡಾಟ ಹೆಚ್ಚಾಗಿ ಕೊರೊನಾ ಸೋಂಕು ಜಿಲ್ಲೆಗೂ ಕಾಲಿಡಬಹುದು. ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಅವಾಂತರ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬ ಭಯ ಸಾರ್ವಜನಿಕರಲ್ಲಿ ಕಾಡುತ್ತಿದೆ. ಹೀಗಾಗಿ ಲಾಕ್‍ಡೌನ್ ಮುಂದುವರೆಸಿ ಎಂದು ಜನರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.