– ಮಾನಸ, ನವ್ಯಾ ಸ್ನೇಹ ನೆನೆದು ಕಣ್ಣೀರಿಟ್ಟ ಪೋಷಕರು
ಹಾಸನ: ಚಿತ್ರದುರ್ಗದ (Chitradurga) ಗುರ್ಲತ್ತು ಬಳಿ ನಡೆದ ಬಸ್ ದುರಂತದಲ್ಲಿ (Accident) ಮಗಳ ಕಳೆದುಕೊಂಡ ಹೆತ್ತವರ ದುಃಖ ಹೇಳತೀರದಾಗಿದೆ. ಬಸ್‌ನಲ್ಲಿ ಸಜೀವ ದಹನವಾದ ಯುವತಿ ನವ್ಯಾ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಮಗಳ ನೆನೆದು ತಂದೆ ಮಂಜಪ್ಪ ಕಣ್ಣೀರಿಡುತ್ತಿದ್ದಾರೆ.
ಚನ್ನರಾಯಪಟ್ಟಣದಲ್ಲಿ (Channarayapatna) ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಂಜಪ್ಪ ನಿನ್ನೆ (ಡಿ.25) ಬೆಳಿಗ್ಗೆ 7 ಗಂಟೆಗೆ ನಮಗೆ ವಿಷಯ ತಿಳಿಯಿತು. ಮಾನಸ, ನವ್ಯಾ, ಮಿಲನ ಮೂವರು ಒಟ್ಟಿಗೆ ಹೋಗಿದ್ದರು. ಅದರಲ್ಲಿ ಮಿಲನ ಬದುಕಿದ್ದು, ಅವರು ನಮಗೆ ಫೋನ್ ಮಾಡಿ ಹೇಳಿದ್ರು. ಆಸ್ಪತ್ರೆಗೆ ತೆರಳಿ ಮಗಳಿಗಾಗಿ ಹುಡುಕಾಡಿದ ಬಗ್ಗೆ ನೆನೆದು ಮಂಜಪ್ಪ ಗದ್ಗದಿತರಾದರು. ನಮ್ಮ ಮಗಳು ಹಾಗೂ ಮಾನಸ ಸಂಪೂರ್ಣ ಸುಟ್ಟು ಹೋಗಿದ್ದಾರೆ. ಮೃತದೇಹ ಕಂಡು ಹಿಡಿಯಲು ಆಗದ ರೀತಿ ಆಗಿತ್ತು ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: Chitradurga Bus Accident| ನಾನು, ರಕ್ಷಿತಾ ಜಿಗಿದು ಹೊರ ಬಂದ್ವಿ, ರಶ್ಮಿ ಒಳಗೆ ಸಿಲುಕಿದ್ರು: ದುರಂತದ ಭೀಕರತೆ ಬಿಚ್ಚಿಟ್ಟ ಗಗನಶ್ರೀ
ಮಾನಸ ಹಾಗೂ ನವ್ಯಾ ಒಂದೇ ಕಾಲೇಜಲ್ಲಿ ಓದಿದ್ದು, ಒಂದೇ ರೀತಿಯ ಬಟ್ಟೆ ತೆಗೆದುಕೊಳ್ಳತ್ತಿದ್ದರು. ಒಂದೇ ರೀತಿಯ ಆಭರಣ ಧರಿಸುತ್ತಿದ್ದರು. ಒಟ್ಟಿಗೆ ಇದ್ದು, ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಎಲ್ಲಿಗೇ ಹೋಗಲಿ, ಊರಿಗೆ ಬರಲಿ ಒಟ್ಟಿಗೆ ಓಡಾಡೋರು. ಅವರಿಬ್ಬರು ಒಟ್ಟಿಗೆ ಇದ್ದದ್ದು ನಮಗೂ ಧೈರ್ಯ ಇತ್ತು ಎಂದು ಇಬ್ಬರ ಗೆಳೆತನ ನೆನೆದು ಕಣ್ಣೀರಿಟ್ಟರು.
ಎರಡು ವರ್ಷದಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಮಾರತ್‌ಹಳ್ಳಿಯಲ್ಲಿ ವಾಸವಿದ್ದರು. ಮುಂದಿನ ವರ್ಷ ಏಪ್ರಿಲ್ 28-29ಕ್ಕೆ ಮದುವೆ ನಿಶ್ಚಯ ಮಾಡಿದ್ದು, ಮದುವೆಗೆ ಎಲ್ಲಾ ತಯಾರಿ ನಡೆದಿತ್ತು. ಜನವರಿ 25ಕ್ಕೆ ಬೆಂಗಳೂರಿನಲ್ಲಿ ಎಂಗೇಜ್ಮೆಂಟ್ ಕೂಡ ಮಾಡಬೇಕಿತ್ತು. ರಾತ್ರಿ 8 ಗಂಟೆಗೆ ಬಸ್ ಹತ್ತಿದಾಗ ಫೋನ್ ಮಾಡಿ ಮಾತನಾಡಿದ್ದಳು. ಅದೇ ಕೊನೆಯ ಮಾತು ಎಂದರು. ಹೈವೆಯಲ್ಲಿ ಸರ್ಕಾರ ಎತ್ತರದ ಡಿವೈಡರ್ ಹಾಕುವ ರೀತಿ ಮಾಡಲಿ, ರಾತ್ರಿ 12 ಗಂಟೆ ನಂತರ ವಾಹನಗಳ ಓಡಾಟ ನಿಷೇಧಿಸಬೇಕು ಎಂದು ಕಣ್ಣೀರಿಡುತ್ತಲೇ ಒತ್ತಾಯಿಸಿದರು. ಇದನ್ನೂ ಓದಿ: Chitradurga Bus Accident | ಚಿಕಿತ್ಸೆ ಪಡೆಯುತ್ತಿದ್ದ ಬಸ್ ಚಾಲಕ ಸಾವು – ಮೃತರ ಸಂಖ್ಯೆ 7ಕ್ಕೆ ಏರಿಕೆ

