ಚಿತ್ರದುರ್ಗ: ಸಚಿವ ಸಂಪುಟ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸರ್ಕಾರವನ್ನು ನಿರ್ವಹಣೆ ಮಾಡುತ್ತಿರುವ ಸಿಎಂ ಯಡಿಯೂರಪ್ಪನವರಿಗೆ ಆ ವಿಚಾರದಲ್ಲಿ ಪರಮಾಧಿಕಾರವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಚಿತ್ರದುರ್ಗದ ಮುರುಘಾಮಠ, ಮಾದಾರಚನ್ನಯ್ಯ ಮಠ ಹಾಗೂ ಭೋವಿ ಗುರುಪೀಠಗಳಿಗೆ ಭೇಟಿ ನೀಡಿ, ಡಾ.ಶಿವಮೂರ್ತಿ ಮುರುಘಾ ಶರಣರು, ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಬೋವಿ ಗುರುಪೀಠದ ಶ್ರೀಸಿದ್ದರಾಮೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಪ್ರತಿಯೊಬ್ಬ ಶಾಸಕರಿಗೂ ತಾವು ಸಚಿವರಾಗಬೇಕೆಂಬ ಆಸೆ ಇರುತ್ತದೆ. ಆದರೆ ಪ್ರತಿ ಜಿಲ್ಲೆಗಳಲ್ಲೂ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಹೀಗಾಗಿ ಸಿಎಂ ಯಡಿಯೂರಪ್ಪ ಯಾವುದೇ ಸಮಾಜಕ್ಕೆ ಅನ್ಯಾಯವಾಗದಂತೆ ಕಾಳಜಿವಹಿಸಲಿದ್ದು ಎಲ್ಲಾ ಜಿಲ್ಲೆಗಳಿಗೂ ನ್ಯಾಯ ಒದಗಿಸಲಿದ್ದಾರೆ ಎಂದರು.
Advertisement
Advertisement
ಇದೇ ವೇಳೆ ಪೌರತ್ವ ತಿದ್ದುಪಡಿಗೆ ಕಾಂಗ್ರೆಸ್ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಪೌರತ್ವ ತಿದ್ದುಪಡಿಗೆ ಜನಸಾಮಾನ್ಯರು ಹಾಗೂ ಮತದಾರರು ಎಲ್ಲೂ ವಿರೋಧ ವ್ಯಕ್ತಪಡಿಸಿಲ್ಲ. ದೇಶದ ಎಲ್ಲಾ ಅಲ್ಪಸಂಖ್ಯಾತರ ಹಿತ ಕಾಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ಮುಸಲ್ಮಾನರು ಬಿಜೆಪಿ ಹಾಗೂ ಮೋದಿಯವರನ್ನು ಒಪ್ಪಿಕೊಂಡಿದ್ದಾರೆ ಎಂದರು.
Advertisement
Advertisement
ಬಿಜೆಪಿಯ ಕೆಲಸವನ್ನು ಸಹಿಸಲಾಗದ ಕಾಂಗ್ರೆಸ್ ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಜೊತೆಗೆ ಕಾಂಗ್ರೆಸ್ ಈಗಾಗಲೇ ದೇಶದಲ್ಲಿ ದಿವಾಳಿಯಾಗಲಿದ್ದು ಬೌದ್ಧಿಕ ವೈಚಾರಿಕ ಹಾಗೂ ಸಂಘಟನಾತ್ಮಕವಾಗಿಯೂ ಸಹ ದಿವಾಳಿಯಾಗಿದೆ. ಹೀಗಾಗಿ ಬ್ರಿಟಿಷರು ಭಾರತ ಬಿಟ್ಟು ಹೋದ ಬಳಿಕ ಕಾಂಗ್ರೆಸ್ಸಿಗರು ಕೂಡ ಡಿವೈಡ್ ಅಂಡ್ ರೂಲ್ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ದೇಶದ ಯಾವೊಬ್ಬ ಮಸಲ್ಮಾನ ಪ್ರಜೆಗೂ ತೊಂದರೆಯಾಗದಂತೆ ಕಾಳಜಿವಹಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡರು.