ಬೆಂಗಳೂರು: ಎಂ.ಬಿ. ಮಂಜುಳಾ ಶಿವಾರ್ಜುನ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ಶಿವಾರ್ಜುನ. ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ನಟಿಸಿರೋ ವಿಚಾರ ಗೊತ್ತೇ ಇದೆ. ಇದರಲ್ಲಿ ತಾರಾ ಕೂಡಾ ಬಹುಮುಖ್ಯವಾದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕಾಗಿ ನಟಿ ತಾರಾ ಅವರ ಮುದ್ದಿನ ಮಗ ಶ್ರೀಕೃಷ್ಣ ಈ ಚಿತ್ರಕ್ಕಾಗಿ ಮೊದಲ ಬಾರಿ ವಾಯ್ಸ್ ಡಬ್ ಮಾಡಿದ್ದಾನೆ.
ತಾರಾ ಅವರೇ ಮಗ ಶ್ರೀಕೃಷ್ಣನನ್ನು ಕೂರಿಸಿಕೊಂಡು ಡಬ್ಬಿಂಗ್ ಕಾರ್ಯವನ್ನು ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ. ಈ ಸಿನಿಮಾಗಾಗಿ ಪುಟ್ಟ ಶ್ರೀಕೃಷ್ಣ ತೊದಲು ಮಾತುಗಳ ಮೂಲಕ ಲೀಲಾಜಾಲವಾಗಿಯೇ ಡೈಲಾಗ್ ಹೇಳುತ್ತಾ ಡಬ್ ಮಾಡಿದ್ದಾನೆ. ತಾರಾ ದಶಕಗಳಿಂದಲೂ ಸಿನಿಮಾ ರಂಗದ ಭಾಗವಾಗಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವವರು. ಅವರ ಮಗ ಕೂಡಾ ಭವಿಷ್ಯದಲ್ಲಿ ಚಿತ್ರರಂಗಕ್ಕೇ ಪಾದಾರ್ಪಣೆ ಮಾಡೋ ಲಕ್ಷಣವೂ ಈ ಮೂಲಕ ಗೋಚರಿಸಿದೆ. ಮಗನ ಮೊದಲ ತೊದಲು ನುಡಿಗಳ ಡಬ್ಬಿಂಗ್ ಕಾರ್ಯದ ಸಂದರ್ಭದಲ್ಲಿ ತಾರಾ ಅವರ ಮುಖದಲ್ಲಿದ್ದ ಖುಷಿಯೇ ಅದನ್ನು ಸೂಚಿಸುವಂತಿದೆ.
Advertisement
Advertisement
ಶಿವಾರ್ಜುನ ನಿಶ್ಚಿತಾ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ. ಮಂಜುಳಾ ಶಿವಾರ್ಜುನ್ ನಿರ್ಮಾಣ ಮಾಡಿರುವ ಮೊದಲ ಚಿತ್ರ. ಚಿತ್ರರಂಗದಲ್ಲಿ ಬಹುಕಾಲದಿಂದಲೂ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಶಿವಾರ್ಜುನ್ ಪಾಲಿನ ಮೊದಲ ಹೆಜ್ಜೆಯೂ ಹೌದು. ಆರಂಭದಲ್ಲಿ ಶೀರ್ಷಿಕೆಯೇ ಇಲ್ಲದೇ ಚಿತ್ರೀಕರಣ ಶುರು ಮಾಡಿ ನಂತರ ನಿರ್ಮಾಪಕ ಶಿವಾರ್ಜನ್ ಹೆಸರನ್ನೇ ಕಥೆಗೆ ಪೂರಕವಾಗಿರೋದರಿಂದ ಶೀರ್ಷಿಕೆಯಾಗಿಡಲಾಗಿದೆ. ಇತ್ತೀಚೆಗಷ್ಟೇ ತೆರೆ ಕಂಡು ಗೆದ್ದಿದ್ದ ಸಿಂಗ ಚಿತ್ರದಲ್ಲಿ ತಾರಾ ಚಿರು ಅಮ್ಮನಾಗಿ ಮನೋಜ್ಞ ಅಭಿನಯ ನೀಡಿದ್ದರು. ಇದೀಗ ಶಿವಾರ್ಜುನ ಚಿತ್ರದಲ್ಲಿಯೂ ತಾರಾ ಸಾಥ್ ಕೊಟ್ಟಿದ್ದಾರೆ. ಇದಕ್ಕೆ ವಾಯ್ಸ್ ಡಬ್ ಮಾಡೋ ಮೂಲಕ ತಾರಾ ಪುತ್ರ ಶ್ರೀಕೃಷ್ಣನೂ ಜೊತೆಯಾಗಿದ್ದಾನೆ.
Advertisement
Advertisement
ಈ ಹಿಂದೆ ಧೈರ್ಯಂ, ಲೌಡ್ ಸ್ಪೀಕರ್ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಶಿವತೇಜಸ್ ಶಿವಾರ್ಜುನನ ಸಾರಥ್ಯ ವಹಿಸಿಕೊಂಡಿದ್ದಾರೆ. ಇದೊಂದು ರಗಡ್ ಕಥೆ ಹೊಂದಿರೋ ಚಿತ್ರ ಅನ್ನೋದಕ್ಕೆ ಚಿರಂಜೀವಿ ಸರ್ಜಾರ ಕೆಲ ಗೆಟಪ್ಪುಗಳೇ ಸಾಕ್ಷಿಯಂತಿವೆ. ಆಕ್ಷನ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿರೋ ಈ ಚಿತ್ರಕ್ಕೆ ಹೆಚ್.ಸಿ ವೇಣು ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಸುರಾಗ್ ಸಂಗೀತ, ರವಿವರ್ಮಾ, ವಿನೋದ್, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಸಿಂಗ ಚಿತ್ರದ ಮೂಲಕ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಚಿರಂಜೀವಿ ಸರ್ಜಾ ಇದೀಗ ಮತ್ತೊಮ್ಮೆ ಆಕ್ಷನ್ ಮೂಡಿನಲ್ಲಿ ಎಲ್ಲ ವರ್ಗದ ಪ್ರೇಕ್ಷಕರನ್ನೂ ಮುದಗೊಳಿಸೋ ಇರಾದೆಯೊಂದಿಗೆ ಅಡಿಯಿರಿಸುತ್ತಿದ್ದಾರೆ.