ನೋವು ನಿವಾರಕ ಹುಲಿ ಮೂತ್ರ! – ಚೀನೀ ಝೂನಿಂದ ಮಾರಾಟ, ಬಾಟಲ್‌ಗೆ 596 ರೂ.

Public TV
1 Min Read
Chinese zoo sells bottled tiger urine for Rs 596

ಬೀಜಿಂಗ್‌: ಕೋವಿಡ್‌ ವೈರಸ್‌ನ (Covid Virus) ತವರು ದೇಶ ಚೀನಾ (China) ಈಗ ಹುಲಿ ಮೂತ್ರವನ್ನು (Tiger Urine) ಮಾರಾಟ ಮಾಡುವ ಮೂಲಕ ಸುದ್ದಿಯಾಗಿದೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಇದೆ ಎಂದು ಹೇಳಿ ಮೃಗಾಲಯವೊಂದು (Chinese zoo) ಹುಲಿ ಮೂತ್ರವನ್ನು ಮಾರಾಟ ಮಾಡಲು ಆರಂಭಿಸಿದೆ.

ಚುವಾನ್ ಪ್ರಾಂತ್ಯದಲ್ಲಿ, ಯಾನ್ ಬೈಫೆಂಗ್ಕ್ಸಿಯಾ ವನ್ಯಜೀವಿ ಮೃಗಾಲಯವು ಬಾಟಲ್ ಹುಲಿ ಮೂತ್ರವನ್ನು ಸಂಧಿವಾತ, ಉಳುಕು ಮತ್ತು ಸ್ನಾಯು ನೋವಿಗೆ ಪರಿಹಾರವಾಗಿ ಮಾರಾಟ ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 250 ಎಂಎಲ್‌ ಸೈಬಿರಿಯನ್‌ ಹುಲಿ ಮೂತ್ರಕ್ಕೆ 50 ಯುವಾನ್‌ (ಅಂದಾಜು 596 ರೂ.) ಬೆಲೆಯನ್ನು ನಿಗದಿ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

tiger
ಸಾಂದರ್ಭಿಕ ಚಿತ್ರ

ಹುಲಿ ಮೂತ್ರಕ್ಕೆ ಬಿಳಿ ವೈನ್‌, ಶುಂಠಿ ಚೂರನ್ನು ಹಾಕಿ ಮಿಶ್ರಣ ಮಾಡಿ ನೋವು ಇರುವ ಜಾಗಕ್ಕೆ ಹಾಕಿದರೆ ನೋವು ಕಡಿಮೆಯಾಗುತ್ತದೆ ಎಂದು ತನ್ನ ಪ್ರಚಾರದ ಲೇಬಲ್‌ನಲ್ಲಿ ಮುದ್ರಿಸಿತ್ತು. ಅಷ್ಟೇ ಅಲ್ಲದೇ ಹುಲಿ ಮೂತ್ರವನ್ನು ಕುಡಿಯಲೂಬಹುದು ಎಂದು ಹೇಳಿತ್ತು. ಆದರೆ ಅಲರ್ಜಿಯಾದರೆ ಕುಡಿಯುವುದನ್ನು ನಿಲ್ಲಿಸುವಂತೆ ಉಲ್ಲೇಖಿಸಿತ್ತು. ಇದನ್ನೂ ಓದಿ: AI ರಂಗದಲ್ಲಿ ಡೀಪ್‌ಸೀಕ್ ಸಂಚಲನ – ಅಮೆರಿಕ ಷೇರುಪೇಟೆ ಶೇಕ್!

ತಜ್ಞರು ಹುಲಿ ಮೂತ್ರ ಮಾರಾಟ ಮಾಡುವ ಅಭ್ಯಾಸವನ್ನು ಅನೈತಿಕ ಮತ್ತು ಅಪಾಯಕಾರಿ ಎಂದು ಹೇಳಿ ಖಂಡಿಸಿದ್ದಾರೆ. ಹುಲಿ ಮೂತ್ರವು ಸಾಂಪ್ರದಾಯಿಕ ಚೀನೀ ಔಷಧದಲ್ಲಿ ಮಾನ್ಯತೆ ಪಡೆದ ಚಿಕಿತ್ಸೆಯಲ್ಲ. ಪುರಾವೆಗಳಿಲ್ಲದೆ ಅದರ ಮೌಲ್ಯವನ್ನು ಉತ್ಪ್ರೇಕ್ಷಿಸುವುದು ಸಾಂಪ್ರದಾಯಿಕ ಚೀನೀ ಔಷಧಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.

ಚೀನೀ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ಹುಲಿಯನ್ನು ಶಕ್ತಿಯ ಲಾಂಛನಗಳಾಗಿ ನೋಡಲಾಗುತ್ತದೆ. ಪ್ರಾಚೀನ ವೈದ್ಯಕೀಯ ಸಾಹಿತ್ಯದಲ್ಲಿ ಹುಲಿ ಮೂಳೆಗಳನ್ನು ಸಂಧಿವಾತ ಮತ್ತು ಅಪಸ್ಮಾರ ಸೇರಿದಂತೆ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಿದ ಬಗ್ಗೆ ಉಲ್ಲೇಖವಿದೆ.

ಹುಲಿ ಬೇಟೆಯನ್ನು ಚೀನಾ ಸರ್ಕಾರ ನಿಷೇಧಿಸಿದೆ. ನಿಯಮ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಚೀನಿ ಸಾಮಾಜಿಕ ಜಾಲತಾಣದಲ್ಲಿ ಈಗ ಈ ವಿಚಾರದ ಬಗ್ಗೆ ಜನ ಚರ್ಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

 

Share This Article