InternationalLatestMain Post

ದಂಪತಿಗೆ ಮೂರನೇ ಮಗುವಾದರೆ 11 ಲಕ್ಷ ರೂ. ಆಫರ್ ನೀಡಿದ ಖಾಸಗಿ ಕಂಪನಿ

ಬೀಜಿಂಗ್: ಜನಸಂಖ್ಯೆಯಲ್ಲಿ ನಂಬರ್ 1 ಸ್ಥಾನ ಪಡೆದಿರುವ ಚೀನಾದಲ್ಲಿ ಇದೀಗ ಜನಸಂಖ್ಯೆ ಕಡಿಮೆಯಾಗುತ್ತಿದೆ. ಜನಸಂಖ್ಯಾ ಅಭಿವೃದ್ಧಿ ದರ (PDR) ಬಹುತೇಕ ಶೂನ್ಯಕ್ಕೆ ತಲುಪಿದೆ. ಇದರಿಂದ ಕಂಗೆಟ್ಟಿರುವ ಚೀನಾದ ಖಾಸಗಿ ಕಂಪೆನಿಯೊಂದು ದಂಪತಿಗೆ ಮೂರನೇ ಮಗುವಾದರೆ 11 ಲಕ್ಷ ರೂ. ನೀಡುವುದಾಗಿ ಆಫರ್ ನೀಡಿದೆ.

ಚೀನಾದಲ್ಲಿ ಜನಸಂಖ್ಯಾ ಅಭಿವೃದ್ಧಿ ದರ ಬಹುತೇಕ ಶೂನ್ಯಕ್ಕೆ ತಲುಪಿದೆ. 2019ರಲ್ಲಿ 140 ಕೋಟಿ ಇದ್ದ ಜನಸಂಖ್ಯೆಗೆ ಹೋಲಿಸಿದರೆ ಕಳೆದ ಒಂದು ವರ್ಷದಲ್ಲಿ ದೇಶದ ಜನಸಂಖ್ಯೆಯಲ್ಲಿ ಕೇವಲ 1 ಕೋಟಿಯಷ್ಟು ಮಾತ್ರವೇ ಏರಿಕೆ ಆಗಿದೆ ಎಂದು ಇತ್ತೀಚಿಗೆ ಬಿಡುಗಡೆ ಮಾಡಲಾದ 7ನೇ ರಾಷ್ಟ್ರೀಯ ಜನಗಣತಿ ಮಾಹಿತಿ ಸ್ಪಷ್ಟಪಡಿಸಿದೆ. ಇದರಿಂದ ಚೀನಾದಲ್ಲಿ ಮುಂಬರುವ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಹಾಗೂ ಖರೀದಿ ಸಾಮರ್ಥ್ಯ ಇಳಿಕೆ ಆಗುವ ಅಪಾಯ ಎದುರಾಗಿದೆ. ಇದನ್ನು ತಡೆಗಟ್ಟಲು ಚೀನಾ ಸರ್ಕಾರ ಇದೀಗ ಪ್ಲಾನ್ ಮಾಡುತ್ತಿದೆ. ಸರ್ಕಾರ ಜನಸಂಖ್ಯೆ ಏರಿಕೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಜೊತೆಗೆ ಖಾಸಗಿ ಕಂಪನಿಗಳು ಸರ್ಕಾರದ ಜೊತೆ ಕೈಜೋಡಿಸಲು ತಯಾರಿ ನಡೆಸಿದೆ. ಇದನ್ನೂ ಓದಿ: ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಂಡ ಪೂನಂ ಪಾಂಡೆ : ಇದರ ಹಿಂದಿದೆ ಕಣ್ಣೀರಿನ ಕಥೆ

ಮೂರನೇ ಮಗುವಿಗೆ 11 ಲಕ್ಷ ರೂ ಆಫರ್:
ಚೀನಾದಲ್ಲಿ ಜನಸಂಖ್ಯೆ ಏರಿಸಲು ಬೀಜಿಂಗ್‍ನ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಎಂಬ ಖಾಸಗಿ ಕಂಪನಿಯೊಂದು ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಆಫರ್ ನೀಡಿದೆ. ತಮ್ಮಲ್ಲಿ ಕೆಲಸ ಮಾಡುವ ಪುರುಷ ಅಥವಾ ಮಹಿಳಾ ಉದ್ಯೋಗಿಗಳು ಮೂರನೇ ಮಗು ಪಡೆದರೆ ಬರೋಬ್ಬರಿ 90,000 ಯುವಾನ್ (11 ಲಕ್ಷ ರೂ.) ಪ್ರೋತ್ಸಾಹ ಧನ ನೀಡಲಾಗುವುದು ಎಂದು ಆಫರ್ ನೀಡಿದೆ. ಮೂರನೇ ಮಗುವಿಗೆ ಮಾತ್ರವಲ್ಲದೇ ಎರಡನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗೆ 60,000 ಯುವಾನ್ (7 ಲಕ್ಷ ರೂ.) ಮತ್ತು ಮೊದಲ ಮಗುವಿಗೆ ಜನ್ಮ ನೀಡಿದರೆ 30,000 ಯುವಾನ್ (3.50 ಲಕ್ಷ ರೂ.) ನೀಡುವುದಾಗಿ ಘೋಷಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ. ಇದನ್ನೂ ಓದಿ: ನನಗೋಸ್ಕರ ಮುಸ್ಲಿಮ್ ಧರ್ಮಕ್ಕೆ ಮತಾಂತರವಾಗಲು ಸಿದ್ಧರಿದ್ದರು: ನಾಗರಾಜು ಪತ್ನಿ ಅಶ್ರಿನ್

ಚೀನಾ ಜನಸಂಖ್ಯೆಯನ್ನು ನಿಯಂತ್ರಿಸಲು 1980ರಲ್ಲಿ ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತಂದಿದ್ದು, ಆ ಬಳಿಕ ಜನಸಂಖ್ಯೆ ಕಡಿಮೆ ಆಗುತ್ತಿರುವುದನ್ನು ಗಮನಿಸಿ 2021ರಲ್ಲಿ ಚೀನಾ ಮೂರು ಮಕ್ಕಳ ನೀತಿಯನ್ನು ಪರಿಚಯಿಸಿತ್ತು. ಇದೀಗ ಈ ನೀತಿಯನ್ನು ಉತ್ತೇಜಿಸಲು ಸರ್ಕಾರವೇ ವಿವಿಧ ಯೋಜನೆಗಳನ್ನು ಜಾರಿಗೆ ಮುಂದಾಗಿದೆ. ಜನಸಂಖ್ಯಾ ಬೆಳವಣಿಗೆ ದರ ಕುಸಿಯುತ್ತಿರುವುದರಿಂದ ಚೀನಾಗೆ ಮುಂದಿನ ದಿನಗಳಲ್ಲಿ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ ಚೀನಾ ಜನಸಂಖ್ಯೆ ಏರಿಕೆಗೆ ಸರ್ಕಸ್ ಆರಂಭಿಸಿದೆ.

Leave a Reply

Your email address will not be published.

Back to top button