ಬೀಜಿಂಗ್: ಎತ್ತರದ ಕಟ್ಟಡಗಳ ಮೇಲೆ ಸಾಹಸ ಮಾಡುವ ಮೂಲಕ ಫೇಮಸ್ ಆಗಿದ್ದ ಚೀನಾದ ವ್ಯಕ್ತಿಯೊಬ್ಬ 62 ಅಂತಸ್ತಿನ ಕಟ್ಟಡದ ಮೇಲೆ ಸಾಹಸ ಮಾಡಲು ಹೋಗಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
26 ವರ್ಷದ ವೂ ಯೊಂಗ್‍ನಿಂಗ್ ಸಾವನ್ನಪ್ಪಿರೋ ವ್ಯಕ್ತಿ. ಈತ ಚೀನಾದ ಸಾಮಾಜಿಕ ಜಾಲತಾಣ ವೀಬೋದಲ್ಲಿ ಭಾರೀ ಸಂಖ್ಯೆಯ ಫಾಲೋವರ್‍ಗಳನ್ನ ಹೊಂದಿದ್ದ. ಯಾವುದೇ ಸುರಕ್ಷಾ ಸಲಕರಣೆಗಳಿಲ್ಲದೆ ಎತ್ತರದ ಕಟ್ಟಡಗಳ ಮೇಲೆ ಸಾಹಸ ಮಾಡಿ ತನ್ನ ಸಾಹಸದ ವಿಡಿಯೋಗಳನ್ನ ಪೋಸ್ಟ್ ಮಾಡ್ತಿದ್ದ. ಈತನ ಕೊನೆಯ ಪೋಸ್ಟ್ ಅಪ್‍ಲೋಡ್ ಆಗಿರುವುದು ನವೆಂಬರ್ 8ರಂದು.
ವೂ ಪ್ರೇಯಸಿ ಆತನ ಸಾವಿನ ಬಗ್ಗೆ ಒಂದು ತಿಂಗಳ ನಂತರ ಅಂದರೆ ಡಿಸೆಂಬರ್ 8ರಂದು ವೀಬೋದಲ್ಲಿ ದೃಢಪಡಿಸಿದ್ದಾಳೆಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇಲ್ಲಿನ ಹುನಾನ್ ಪ್ರಾಂತ್ಯದ ಚಾಂಗ್ಸಾದಲ್ಲಿನ ಹುವಾಯಾನ್ ಹುವಾ ಸೆಂಟರ್ ಮೇಲೆ ಸಾಹಸ ಮಾಡುವಾಗ ಈ ದುರಂತ ಸಂಭವಿಸಿದೆ. ಕಟ್ಟಡದ ತುತ್ತ ತುದಿಯಲ್ಲಿ ವೂ ಪುಶ್‍ಅಪ್ಸ್ ಮಾಡಲು ಹೋಗಿದ್ದಾನೆ. ಮೊದಲಿಗೆ ಗ್ರಿಪ್ ಸಿಗದೆ ಒದ್ದಾಡಿದ್ದಾನೆ. ಬಳಿಕ ಮೂರ್ನಾಲ್ಕು ಬಾರಿ ಪುಶ್ ಅಪ್ಸ್ ಮಾಡಿದ್ದು ನೋಡ ನೋಡ್ತಿದ್ದಂತೆ ಕಟ್ಟಡದಿಂದ ಕೆಳಗೆ ಬಿದ್ದಿದ್ದಾನೆ.
ವೂ ತನ್ನ ಈ ಸಾಹಸದಿಂದ ಗೆದ್ದ ಹಣವನ್ನ ತನ್ನ ಮದುವೆಗೆ ಖರ್ಚು ಮಾಡಬೇಕೆಂದಿದ್ದ ಹಾಗೂ ತನ್ನ ತಾಯಿಯ ಚಿಕಿತ್ಸೆಗಾಗಿ ಬಳಸಬೇಕೆಂದಿದ್ದ ಎಂದು ಆತನ ಸಂಬಂಧಿಕರು ತಿಳಿಸಿರುವುದಾಗಿ ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
https://www.youtube.com/watch?v=NMN4986slUA