InternationalLatestMain Post

ಯಾವ ರಕ್ತದ ಗುಂಪಿನವರಿಗೆ ಕೊರೊನಾ ಬೇಗ ಬರುತ್ತದೆ? – ಚೀನಾ ಅಧ್ಯಯನ ವರದಿ ಬಹಿರಂಗ

Advertisements

– ಕೊರೊನಾ ಕೇಂದ್ರ ಸ್ಥಳ ವುಹಾನ್‍ನಲ್ಲಿ ಅಧ್ಯಯನ
– ಎ ಗುಂಪಿನ ಶೇ.41 ಮಂದಿ ಬಲಿ
– ಸಂಶೋಧನೆ ವರದಿ ನೋಡಿ ಯಾರೂ ಭಯಪಡಬೇಕಿಲ್ಲ

ಬೀಜಿಂಗ್: ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ಈಗ ಸಾಕಷ್ಟು ಅಧ್ಯಯನ ನಡೆಸುತ್ತಿದ್ದು, ಅದರಲ್ಲೂ ‘ಎ’ ರಕ್ತದ ಗುಂಪುಗಳನ್ನು ಹೊಂದಿದ ವ್ಯಕ್ತಿಗಳಿಗೆ ವೇಗವಾಗಿ ವೈರಸ್ ದಾಳಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಚೀನಾದ ಸಂಶೋಧಕರು ವುಹಾನ್ ನಲ್ಲಿ ಮೃತಪಟ್ಟ 206 ವ್ಯಕ್ತಿಗಳು ಸೇರಿದಂತೆ ಕೊರೊನಾ ಪೀಡಿತ 2,173 ಮಂದಿ ಜೊತೆಗೆ ಕೊರೊನಾ ಪೀಡಿತರಲ್ಲದ 3,694 ಮಂದಿಯ ರಕ್ತದ ಮಾದರಿಯನ್ನು ಅಧ್ಯಯನಕ್ಕೆ ಬಳಸಿದ್ದಾರೆ.

‘ಎ’ ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳಿಗೆ ಬೇಗನೆ ವೈರಸ್ ತಗಲುತ್ತದೆ ಎಂಬ ವಿಚಾರ ಅಧ್ಯಯನದಿಂದ ತಿಳಿದು ಬಂದಿದೆ. ಸಂಶೋಧಕರು ನಡೆಸಿದ ಅಧ್ಯಯನ www.medrxiv.org ವೆಬ್‍ಸೈಟಿನಲ್ಲಿ ಪ್ರಕಟವಾಗಿದೆ.

ಸಾಮಾನ್ಯ ಜನಸಂಖ್ಯೆಯಲ್ಲಿ ಶೇ.34 ರಷ್ಟು ‘ಓ’ ಗುಂಪಿನವರಿದ್ದರೆ ‘ಎ’ ಗುಂಪಿನವರು ಶೇ.32 ಮಂದಿ ಇರುತ್ತಾರೆ. ಆದರೆ ಪರೀಕ್ಷೆಯಲ್ಲಿ ಶೇ.25 ರಷ್ಟು ‘ಓ’ ರಕ್ತದ ಗುಂಪು ಹೊಂದಿದ್ದವರಿಗೆ ಕೊರೊನಾ ಬಂದಿದ್ದರೆ, ‘ಎ’ ಗುಂಪಿನ ಶೇ.41 ರಷ್ಟು ಜನರಿಗೆ ಕೊರೊನಾ ಬಂದಿದೆ ಎಂದು ಅಧ್ಯಯನ ತಿಳಿಸಿದೆ.

ಮೃತಪಟ್ಟ 206 ಜನರ ಪೈಕಿ 85 ಮಂದಿ ‘ಎ’ ರಕ್ತದ ಗುಂಪು ಹೊಂದಿದ್ದಾರೆ. ‘ಎ’ ರಕ್ತ ಗುಂಪು ಹೊಂದಿರುವ ಶೇ.41 ಮಂದಿ ಮೃತಪಟ್ಟಿರುವುದು ಸಂಶೋಧಕರಿಗೆ ಅಚ್ಚರಿ ಮೂಡಿಸಿದೆ.

ವುಹಾನ್ ಪ್ರದೇಶದಲ್ಲಿ 1.1 ಕೋಟಿ ಜನರಿದ್ದು ಒಟ್ಟು ಶೇ.34 ರಷ್ಟು ಜನ ‘ಎ’ ಗುಂಪಿನವರಿದ್ದಾರೆ. ವಿಶೇಷವಾಗಿ ‘ಎ’ ಗುಂಪಿನ ರಕ್ತವನ್ನು ಹೊಂದಿರುವ ವ್ಯಕ್ತಿಗಳ ಮೇಲೆ ಹೆಚ್ಚು ಜಾಗೃತೆಯಿಂದ ನಿಗಾ ವಹಿಸಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು  ಶೇ. 22  ‘ಓ’ ಗುಂಪಿನ ಮಂದಿಗೆ ಕೊರೊನಾ ಬಂದಿದ್ದರೆ, ಶೇ.38 ರಷ್ಟು ‘ಎ’ಮಂದಿ ಮೇಲೆ ವೈರಸ್ ದಾಳಿ ಮಾಡಿದೆ ಎಂದು ಅಧ್ಯಯನ ತಿಳಿಸಿದೆ.

 ‘ಎ’ ಗುಂಪು ರಕ್ತವನ್ನು ಹೊಂದಿರುವ ಎಲ್ಲರ ಮೇಲೆ ವೈರಸ್ ಬರುತ್ತದೆ ಎಂದು ಭಯಪಡುವ ಅಗತ್ಯವಿಲ್ಲ. ಹಾಗೆಂದ ಮಾತ್ರಕ್ಕೆ ‘ಓ’ ಗುಂಪಿನ ರಕ್ತವನ್ನು ಹೊಂದಿವ ವ್ಯಕ್ತಿಗಳು ನಮಗೆ ರೋಗ ಬರುವುದಿಲ್ಲ ಎಂದು ತಿಳಿಯುವಂತಿಲ್ಲ. ರೋಗದ ಸುಳಿವು ಸಿಕ್ಕಿದ ಕೂಡಲೇ ಆಸ್ಪತ್ರೆಗೆ ದಾಖಲಾಗುವುದು ಉತ್ತಮ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಸಂಶೋಧಕರ ಈ ವರದಿಯನ್ನು ಇನ್ನು ತಜ್ಞರು ಪರಿಶೀಲಿಸಿಲ್ಲ. ಮತ್ತು ರಕ್ತದ ಗುಂಪುಗಳ ಮಾದರಿಯಲ್ಲಿ ವೈರಸ್ ಬೇರೆ ಬೇರೆ ಪರಿಣಾಮ ಬೀರಲು ಕಾರಣ ಏನು ಎನ್ನುವುದನ್ನು ಸಂಶೋಧಕರು ತಿಳಿಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟವಾದ ವಿವರಣೆ ಪ್ರಕಟವಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಕೊರೊನಾಗೆ ಔಷಧಿ ಕಂಡುಹಿಡಿಯುವ ವಿಜ್ಞಾನಿಗಳು ಈ ವರದಿಯನ್ನು ಮುಂದಿಟ್ಟುಕೊಂಡು ಸಂಶೋಧನೆ ನಡೆಸುವ ಸಾಧ್ಯತೆಯಿದೆ.

 

Leave a Reply

Your email address will not be published.

Back to top button