– 8 ಮಂದಿಯಲ್ಲಿ ಮಾತ್ರ ಕಾಣಿಸಿದ ಕೊರೊನಾ
– ಕೆಲ ಕೈಗಾರಿಕೆ ತೆರೆಯಲು ಸರ್ಕಾರದಿಂದ ಅನುಮತಿ
ಬೀಜಿಂಗ್: ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಬೆನ್ನಲ್ಲೇ ಚೀನಾದಲ್ಲಿ ಪೀಡಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದೇ ಮೊದಲ ಬಾರಿ ಕೊರೊನಾ ಕೇಂದ್ರ ಬಿಂದು ಎಂದು ಬಿಂಬಿತವಾಗಿರುವ ಹುಬೆ ಪ್ರಾಂತ್ಯದಲ್ಲಿ ಹೊಸ ಕೊರೊನಾ ಪೀಡಿತರ ಸಂಖ್ಯೆ ಸಿಂಗಲ್ ಡಿಜಿಟ್‍ಗೆ ಇಳಿಕೆಯಾಗಿದೆ.
ಚೀನಾದಲ್ಲಿ ಕೊರೊನಾ ವೈರಸ್ ಹರಡುವ ಪ್ರಮಾಣ ಕಡಿಮೆಯಾಗಿದೆ. ಇದೆ ಮೊದಲ ಬಾರಿಗೆ ಹುಬೆ ಪ್ರಾಂತ್ಯದಲ್ಲಿ ಹೊಸದಾಗಿ 8 ಮಂದಿಯಲ್ಲಿ ಮಾತ್ರ ವೈರಸ್ ಕಾಣಿಸಿದೆ ಎಂದು ಚೀನಾದ ಆರೋಗ್ಯ ಇಲಾಖೆ ಗುರುವಾರ ಹೇಳಿದೆ.
ಕೊರೊನಾ ವೈರಸ್ ಆರಂಭಗೊಂಡ ಬಳಿಕ ಎರಡು ತಿಂಗಳ ಕಾಲ ಮುಚ್ಚಿದ್ದ ಹುಬೆ ಪ್ರಾಂತ್ಯದ ಕೆಲ ಕೈಗಾರಿಕೆಗಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ಕೊರೊನಾ ವೈರಸ್ ಗರಿಷ್ಟ ಮಟ್ಟ ಈಗಾಗಲೇ ಮುಕ್ತಾಯಗೊಂಡಿದ್ದು ಈಗ ಸೋಂಕು ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿಫೆಂಗ್ ತಿಳಿಸಿದ್ದಾರೆ. ಇದನ್ನು ಓದಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ – ವುಹಾನ್‍ನಲ್ಲಿ ವೈದ್ಯರ ಸಂಭ್ರಮ
ಬುಧವಾರ ಹುಬೆ ಪ್ರಾಂತ್ಯ ಬಿಟ್ಟು ಚೀನಾದ ಇತರ ಕಡೆ ಸೇರಿ ಒಟ್ಟು 7 ಕೇಸ್‍ಗಳು ದಾಖಲಾಗಿವೆ. ಒಟ್ಟು ಬುಧವಾರ ಚೀನಾದಲ್ಲಿ 15 ಪ್ರಕರಣಗಳು ಪತ್ತೆಯಾಗಿದ್ದರೆ ಮಂಗಳವಾರ 24 ಕೇಸ್ ಪತ್ತೆಯಾಗಿತ್ತು. ಹುಬೆ ಪ್ರಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಟೊಮೊಬೈಲ್ ಕೈಗಾರಿಕೆಗಳು ಸ್ಥಾಪನೆಗೊಂಡಿದ್ದು ಜ.23 ರಿಂದ ಮುಚ್ಚಲ್ಪಿಟ್ಟಿತ್ತು.
ವಿಶ್ವದಲ್ಲಿ ಕೊರೊನಾ ವೈರಸ್ ವೇಗವಾಗಿ ಈಗ ಹರಡುತ್ತಿದ್ದರೆ ಕಳೆದ 7 ದಿನಗಳಿಂದ ಚೀನಾದಲ್ಲಿ ಗಣನೀಯಗಾಗಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿದೆ. ಚೀನಾ ಸರ್ಕಾರ ಕೊರೊನಾ ಬಿಗಿ ನಿಯಂತ್ರಣ ಕ್ರಮವನ್ನು ಕೈಗೊಂಡಿತ್ತು. ಹುಬೆ ಪ್ರಾಂತ್ಯದ ವುಹಾನ್ ನಗರ ಕೊರೊನಾ ರೋಗದ ಕೇಂದ್ರ ಸ್ಥಳವಾಗಿದ್ದು, 1.1 ಕೋಟಿ ಜನರಿದ್ದ ಈ ನಗರ ಪ್ರವೇಶಿಸದಂತೆ ಜನರಿಗೆ ನಿರ್ಬಂಧ ಹೇರಲಾಗಿತ್ತು.
ಚೀನಾದಲ್ಲಿ ಒಟ್ಟು ಇಲ್ಲಿಯವರಗೆ 80,793 ಕೇಸ್ ದಾಖಲಾಗಿದ್ದು, 62,793 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬುಧವಾರ 11 ಮಂದಿ ಸೇರಿ ಒಟ್ಟು 3,169 ಮಂದಿ ಮೃತಪಟ್ಟಿದ್ದಾರೆ. ಹಲವು ಉದ್ಯಮಗಳು ಭಾರೀ ನಷ್ಟ ಹೊಂದಿದ್ದು ವಿಶೇಷವಾಗಿ ಚೀನಾ ಏರ್‍ಲೈನ್ ಅಂದಾಜು 3 ಶತಕೋಟಿ ಡಾಲರ್ ನಷ್ಟ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.