ಶ್ರೀನಗರ/ಇಸ್ಲಾಮಾಬಾದ್/ಬೀಜಿಂಗ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ (Pahalgam Terrorist Attack) ಬಳಿಕ ಭಾರತ ಸರ್ಕಾರ ಪಾಕ್ ವಿರುದ್ಧ ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದೆ, ಇದರಿಂಧ ಪಾಕಿಸ್ತಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ರೆ ಈ ಬೆಳವಣಿಗೆಯನ್ನು ಚೀನಾ (China) ಸೂಕ್ಮವಾಗಿ ಗಮನಿಸುತ್ತಿದೆ.
ಈ ನಡುವೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಜೊತೆಗೆ ಮಾತನಾಡಿದ್ದು, ಪಾಕಿಸ್ತಾನದ ಬೇಡಿಕೆಯೊಂದಕ್ಕೆ ಬೆಂಬಲ ನೀಡಿರುವುದಾಗಿ ವರದಿಗಳು ತಿಳಿಸಿವೆ.
ಹೌದು. ಪಹಲ್ಗಾಮ್ ದಾಳಿಯ ಕುರಿತು ತಟಸ್ಥ ತನಿಖೆ ನಡೆಸಬೇಕೆಂಬ ಪಾಕಿಸ್ತಾನದ ಬೇಡಿಕೆಗೆ ಚೀನಾ ಬೆಂಬಲ ವ್ಯಕ್ತಪಡಿಸಿದೆ ಎನ್ನಲಾಗಿದೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ.
ಚೀನಾ – ಪಾಕ್ ನಡುವೆ ಮಾತುಕತೆ
ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್ ಪ್ರಕಾರ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಏತನ್ಮಧ್ಯೆ, ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸುತ್ತಿರುವುದಾಗಿ ಚೀನಾ ಹೇಳಿದೆ.
ಪಾಕ್ ಬೇಡಿಕೆ ಏನು?
ಪಹಲ್ಗಾಮ್ ದಾಳಿಯ ತನಿಖೆಯಲ್ಲಿ ರಷ್ಯಾ ಮತ್ತು ಚೀನಾವನ್ನ ಸೇರಿಸಬೇಕೆಂದು ಪಾಕಿಸ್ತಾನ ಒತ್ತಾಯಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸತ್ಯ ಹೇಳುತ್ತಿದ್ದಾರೋ ಅಥವಾ ಸುಳ್ಳು ಹೇಳುತ್ತಿದ್ದಾರೋ ಎಂಬುದನ್ನ ಅಂತಾರಾಷ್ಟ್ರೀಯ ತಂಡ ತನಿಖೆ ಮಾಡಬೇಕು ಎಂದು ಹೇಳಿತ್ತು.