ತಿರುವನಂತಪುರ: ಪತಿಗೆ ಸುಧೀರ್ಘ ಪತ್ರ ಬರೆದು ನಿಫಾ ವೈರಸ್ಗೆ ಬಲಿಯಾಗಿದ್ದ ನರ್ಸ್ ಲಿನಿ ಪತಿ ಇದೀಗ 2ನೇ ಮದುವೆಯಾಗಿದ್ದಾರೆ. ಈ ಮೂಲಕ ಲಿನಿ ಮಕ್ಕಳ ಭವಿಷ್ಯಕ್ಕೆ ಹೆಗಲು ಕೊಟ್ಟಿದ್ದಾರೆ.
ಹೌದು. ಸೋಮವಾರ ಲಿನಿ ಪತಿ ಸಜೀಶ್ ಅವರು ಪ್ರತಿಭಾಳನ್ನು ವರಿಸಿದ್ದಾರೆ. ಈ ಮದುವೆ ಕೇವಲ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸ್ಥಳೀಯ ದೇವಸ್ಥಾನವೊಂದರಲ್ಲಿ ಸರಳವಾಗಿ ನಡೆದಿದೆ.
ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಭಾಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ. ಇತ್ತ ಸಜೀಶ್ ದೊಡ್ಡ ಮಗ 4ನೇ ತರಗತಿಯಲ್ಲಿ ಓದುತ್ತಿದ್ದರೆ, ಚಿಕ್ಕವನು 1ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇದನ್ನೂ ಓದಿ: ಕೇರಳ ನರ್ಸ್ ಲಿನಿಗೆ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ
2018ರಲ್ಲಿ ನಿಫಾ ವೈರಸ್‌ನಿಂದ ಲಿನಿ ಮೃತಪಟ್ಟಿದ್ದಾರೆ. ಆ ಬಳಿಕ ಸಜೀಶ್ ಅವರು ಬಹ್ರೈನ್ ಕೆಲಸ ಬಿಟ್ಟು ತವರಿಗೆ ಮರಳಿದರು. ನಂತರ ಸರ್ಕಾರ ಅವರಿಗೆ ಆರೋಗ್ಯ ಇಲಾಖೆಯಲ್ಲಿ ಕೆಲಸ ನೀಡಿದೆ. ಸದ್ಯ ಸಜೀಶ್ ಹಾಗೂ ಪ್ರತಿಭಾಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹಾಗೂ ಮಾಜಿ ಸಚಿವೆ ಕೆಕೆ ಶೈಲಜಾ ಶುಭಹಾರೈಸಿದ್ದಾರೆ.
ಲಿನಿ ಸಾವನ್ನಪ್ಪಿದ್ದು ಹೇಗೆ..?: ಕೇರಳದ ಪೇರಾಂಬ್ರ ಆಸ್ಪತ್ರೆಯಲ್ಲಿ ದಾಖಲಾದ ಮೊದಲ ನಿಫಾ ವೈರಸ್ ಸೋಂಕು ತಗುಲಿದ್ದ ರೋಗಿಗೆ ಲಿನಿ ಚಿಕಿತ್ಸೆ ನೀಡಿದ್ದರು. ಈ ವೇಳೆ ಅವರಿಗೂ ಸೋಂಕು ಹರಡಿತ್ತು. ತಮಗೆ ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಪತಿಗೆ ಪತ್ರ ಬರೆದಿದ್ದ ಅವರು, ನಾನು ಬಹುತೇಕ ಸಾಯುವುದು ಖಚಿತವಾಗಿದೆ. ನಿಮ್ಮನ್ನು ಮತ್ತೆ ನೋಡುತ್ತೇನೆ ಎಂದು ಅನ್ನಿಸುತ್ತಿಲ್ಲ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವರನ್ನು ನಿಮ್ಮೊಂದಿಗೆ ಗಲ್ಫ್ ಗೆ ಕರೆದುಕೊಂಡು ಹೋಗಿ. ನನ್ನ ತಂದೆಯಂತೆ ಅವರನ್ನು ಇಲ್ಲಿ ಏಕಾಂಗಿಯಾಗಿ ಬಿಡಬೇಡಿ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ತಿಳಿಸಿದ್ದರು.
ಬಳಿಕ ಚಿಕಿತ್ಸೆ ಫಲಿಸದೆ ಸಾವಿಗೀಡಾದ ಲಿನಿ ಅವರ ಮೃತ ದೇಹವನ್ನು ಕೊನೆಯ ಬಾರಿಗೆ ನೋಡಲು ಯಾರಿಗೂ ಅವಕಾಶ ನೀಡದೇ ಅಂತಿಮ ಸಂಸ್ಕಾರ ನಡೆಸಲಾಗಿತ್ತು. ಸೋಂಕು ಇತರೇ ವ್ಯಕ್ತಿಗಳಿಗೂ ಹರಡುವ ಕಾರಣದಿಂದ ಆರೋಗ್ಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಪಿಣರಾಯಿ ವಿಜಯನ್, ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಸ್ಮರಿಸುತ್ತದೆ ಎಂದು ತಿಳಿಸಿದ್ದರು.